ಧಾರವಾಡ:ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಸುಮಾರು 35 ಅಡಿಯಷ್ಟು ಹಿಮದ ಕೆಳಗೆ ಆರು ದಿನಗಳ ಕಾಲ ಸೆಣಸಾಡಿ ಸಾವನ್ನೇ ಹೆದರಿಸಿ ಜೀವ ಉಳಿಸಿಕೊಂಡಿದ್ದ ಧಾರವಾಡದ ಬೆಟಗೇರಿ ನಿವಾಸಿ, ಯೋಧ ಹನುಮಂತಪ್ಪ ಕೊಪ್ಪದ್ (34ವರ್ಷ) ಗುರುವಾರ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಹನುಮಂತಪ್ಪ ಕೊಪ್ಪದ್ ತುಂಬಾ ಧೈರ್ಯಶಾಲಿ, ಧೀರ…ಹೀಗೆ ಯೋಧನ ಕುರಿತ ಕುತೂಹಲಕಾರಿ ಕೆಲವು ವಿವರಗಳು ಇಲ್ಲಿವೆ…
ಹನುಮಂತಪ್ಪ ಕೊಪ್ಪದ್ ಅವರನ್ನು ಹತ್ತಿರದಿಂದ ಬಲ್ಲವರಿಗೆ ಚೆನ್ನಾಗಿ ಗೊತ್ತು ಆತ ಹೋರಾಟಗಾರ ಎಂಬುದು. ಸದಾ ಸವಾಲುಗಳನ್ನೇ ಇಷ್ಟಪಡುತ್ತಿದ್ದರು. ಆದರೆ ಹನುಮಂತಪ್ಪನ ಮಾತು ಮೃದು. ಕುಟುಂಬಿಕರು, ಸ್ನೇಹಿತರ ಜೊತೆ ಸ್ನೇಹಿ ಜೀವಿಯಾಗಿದ್ದರು ಈ ಸಿಯಾಚಿನ್ ಹೀರೋ.
2003ರಲ್ಲಿ ಸೈನ್ಯಕ್ಕೆ ಸೇರಿದ್ದ ಹನುಮಂತಪ್ಪ ಊಟಿಯಲ್ಲಿ 2 ವರ್ಷ ತರಬೇತಿ ಪಡೆದಿದ್ದರು. ನಂತರ ಜಮ್ಮುವಿನ ಗಡಿ ಭಾಗದಲ್ಲಿ ಮೂರು ವರ್ಷ, ಪಂಜಾಬ್ ನ ಭಟಿಂಡಾದಲ್ಲಿ 2 ವರ್ಷ, ಚಂಡೀಗಢದಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಹನುಮಂತಪ್ಪ ಕೊಪ್ಪದ್ ಅವರನ್ನು ಸಿಯಾಚಿನ್ ಗೆ ನಿಯೋಜಿಸಲಾಗಿತ್ತು. ಅಕ್ಕನ ಮಗಳಾದ ಮಹಾದೇವಿಯನ್ನು 2012ರಲ್ಲಿ ಕೊಪ್ಪದ್ ವಿವಾಹವಾಗಿದ್ದರು. ಹನುಮಂತಪ್ಪ ದಂಪತಿಗೆ ನೇತ್ರಾ ಎಂಬ ಒಂದೂವರೆ ವರ್ಷದ ಮಗಳಿದ್ದಾಳೆ.
ಹಿಮಪಾತಕ್ಕೆ ಸಿಲುಕೋ ಮುನ್ನಾ ದಿನ ಕುಟುಂಬಿಕರಲ್ಲಿ ಕೊಪ್ಪದ್ ಮಾತಾಡಿದ್ದರಂತೆ. ಸಿಯಾಚಿನ್ ನಲ್ಲಿ ಹಿಮಪಾತ ಸಂಭವಿಸುವ ಮುನ್ನಾ ದಿನ ಮಾತನಾಡಿದ್ದ ಕೊಪ್ಪದ್, ರಜೆಗೆ ಮನೆಗೆ ಬರುವುದಾಗಿ ತಿಳಿಸಿದ್ದರಂತೆ.
ಕೊಪ್ಪದ್ ಚಿಕ್ಕವನಾಗಿದ್ದಾಗ ಆತನ ಧೈರ್ಯ, ಶಕ್ತಿ, ನಿಷ್ಠೆಯನ್ನು ಕಂಡು ಹನುಮಂತಪ್ಪ ಎಂದು ಹೆಸರಿಡಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.
ಸುಮಾರು 6 ಕಿಲೋ ಮೀಟರ್ ನಷ್ಟು ನಡೆದು ಪ್ರತಿ ದಿನಾ ಹನುಮಂತಪ್ಪ ಶಾಲೆಗೆ ಹೋಗುತ್ತಿದ್ದರಂತೆ. ಹನುಮಂತಪ್ಪ ಮೂರು ಬಾರಿ ಮಿಲಿಟರಿ ಪರೀಕ್ಷೆಯಲ್ಲಿ ರಿಜೆಕ್ಟ್ ಆಗಿದ್ದರು. ಆದರೆ ಛಲ ಬಿಡದೆ ಕೊನೆಗೂ ಸೇನೆಗೆ ಸೇರುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದ್ದರು ಹನುಮಂತಪ್ಪ ಕೊಪ್ಪದ್.
ಈತ ಹುಟ್ಟು ಹೋರಾಟಗಾರ ಎಂದು ಹನುಮಂತಪ್ಪ ಅವರನ್ನು ಸಿಯಾಚಿನ್ ನಲ್ಲಿ ರಕ್ಷಿಸಿದ್ದ ಸಂದರ್ಭದಲ್ಲಿ ಕೊಪ್ಪದ್ ಸಹೋದರ ಬಣ್ಣಿಸಿದ್ದರು. ಹನುಮಂತಪ್ಪ ಯೋಗ ಪಟು ಎಂಬುದನ್ನು ಕೊಪ್ಪದ್ ಗೆಳೆಯರು ಹೇಳುತ್ತಾರೆ. ಸಿಯಾಚಿನ್ ನಲ್ಲಿ ಹಿಮಪಾತದೊಳಕ್ಕೆ ಸಿಲುಕಿದಾಗಲೂ ಹನುಮಂತಪ್ಪ ಯೋಗದಿಂದಲೇ ಅಷ್ಟು ದಿನ ಜೀವಂತವಾಗಿದ್ದ ಎಂದು ಹೇಳುತ್ತಾರೆ.
ಬೆಟದೂರಿಂದ….ಸಿಯಾಚಿನ್ ವರೆಗೆ
*ಭಯೋತ್ಪಾದನೆ ವಿರುದ್ಧ ಹೋರಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು
*ಜಮ್ಮುವಿನ ಗಡಿಭಾಗದಲ್ಲಿ 3 ವರ್ಷ ಕಾರ್ಯನಿರ್ವಹಿಸಿದ್ದರು
*ರಾಮಪ್ಪ ಬಸವ್ವ ದಂಪತಿಯ 4ನೇ ಪುತ್ರ ಕೊಪ್ಪದ್
*ದಂಪತಿಗೆ ನೇತ್ರಾ ಎಂಬ ಒಂದೂವರೆ ವರ್ಷದ ಪುತ್ರಿ ಇದ್ದಾಳೆ
*2002ರ ಅಕ್ಟೋಬರ್ 25ರಂದು ಸೇನೆಗೆ ಸೇರಿದ್ದರು.
19ನೇ ಮದ್ರಾಸ್ ರೆಜಿಮೆಂಟ್ ನಲ್ಲಿ ಕೆಲಸಕ್ಕೆ ನಿಯೋಜನೆ
*2003ರಿಂದ 2006ರವರೆಗೆ ಮಾಹೋರ್ ಪ್ರದೇಶದಲ್ಲಿದ್ದರು
*ಸ್ವಯಂ ಪ್ರೇರಣೆಯಿಂದ ಕಾಶ್ಮೀರಕ್ಕೆ ತೆರಳಿ, ಭಯೋತ್ಪಾದನೆ ವಿರುದ್ಧ ಕೊಪ್ಪದ್ ಹೋರಾಡಿದ್ದರು.
*2015ರ ಆಗಸ್ಟ್ ನಿಂದ ಸಿಯಾಚಿನ್ ನಲ್ಲಿ ಸೇವೆ
*ಬೋಡೋ, ನಾಗಾ ಬಂಡುಕೋರರ ವಿರುದ್ಧ ಹೋರಾಟ
*ಫೆಬ್ರುವರಿ 3ರಂದು ಸಿಯಾಚಿನ್ ನಲ್ಲಿ ಭೀಕರ ಹಿಮಪಾತ
*ಭೀಕರ ಹಿಮಪಾತದಲ್ಲಿ ಕರ್ನಾಟಕದ ಕೊಪ್ಪದ್, ಮಹೇಶ್, ನಾಗೇಶ್ ಸೇರಿದಂತೆ 10 ಯೋಧರು ಕಣ್ಮರೆಯಾಗಿದ್ದರು.
*ಹಿಮದಡಿ ಸಿಲುಕಿದ್ದ ಕೊಪ್ಪದ್ ಅವರನ್ನು ಆರು ದಿನಗಳ ಬಳಿಕ ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು
*3 ದಿನಗಳ ಕಾಲ ಕೋಮಾ ಸ್ಥಿತಿಯಲ್ಲೇ ಇದ್ದರು, ಬಹುಅಂಗಾಂಗ ವೈಫಲ್ಯ
*ಗುರುವಾರ(ಫೆ.11) 11.45ಕ್ಕೆ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಕೊನೆಯುಸಿರು
ಉದಯವಾಣಿ