ಕರ್ನಾಟಕ

ಜಿ.ಪಂ, ತಾ.ಪಂ ಚುನಾವಣೆಗೆ ಬಿಜೆಪಿ ಪ್ರನಾಳಿಕೆ ಬಿಡುಗಡೆ : ಬಿಎಸ್ವೈ ಗೈರು

Pinterest LinkedIn Tumblr

bsyಪ್ರನಾಳಿಕೆಯಲ್ಲೇನಿದೆ ..? : ಬೆಂಗಳೂರು, ಫೆ.6- ಆಡಳಿತಾತ್ಮಕ ಶಕ್ತಿ ವೃದ್ಧಿ, ಸಾಮರ್ಥ್ಯ ವೃದ್ಧಿ, ಸಂಪನ್ಮೂಲ ಕ್ರೋಢೀಕರಣ, ಪಂಚಾಯತ್‌ರಾಜ್ ಸ್ವಾಯ ತ್ತತೆಗೆ ಆದ್ಯತೆ, ಅಭಿವೃದ್ಧಿ ಕೇಂದ್ರಿತ ಆಡಳಿತ, ಸಾಮಾಜಿಕ ವಿಕಾಸವೇ ಮೂಲಮಂತ್ರ ಅಂತ್ಯೋದಯಕ್ಕಾಗಿಯೇ ಕಾರ್ಯಕ್ರಮ…. ಇವು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೊರತಂದಿರುವ ಸಪ್ತಸೂತ್ರಗಳು… ಪಕ್ಷದ ಕಚೇರಿಯಲ್ಲಿ ಇಂದು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರಾದ ಅನಂತ್‌ಕುಮಾರ್, ಸದಾನಂದಗೌಡ, ಪ್ರತಿಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಮುಖಂಡರಾದ ಸುರೇಶ್‌ಕುಮಾರ್, ಆರ್.ಅಶೋಕ್, ನಿರ್ಮಲ್‌ಕುಮಾರ್ ಸುರಾನಾ ಸೇರಿದಂತೆ ಹಲವು ಮುಖಂಡರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಕೈಗೊಂಡಿದ್ದ ಕಾರ್ಯಕ್ರಮ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅನುಷ್ಠಾನಕ್ಕೆ ತಂದಿರುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಸಪ್ತಸೂತ್ರಗಳನ್ನು ಅಳವಡಿಸಿಕೊಂಡಿರುವ ಬಿಜೆಪಿ ಇದಕ್ಕಾಗಿ ತ್ವರಿತ ಮತ್ತು ನೇರವಾಗಿ ಜನರಿಗೆ ಅಭಿವೃದ್ಧಿ ಕಾರ್ಯಗಳ ಫಲ ದೊರೆಯಲು ಆಡಳಿತಾತ್ಮಕ ಶಕ್ತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಬಲಪಡಿಸುವ ಭರವಸೆ ನೀಡಿದೆ.
ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ಮೂಲಕ ಸಾಮರ್ಥ್ಯ ವೃದ್ಧಿ ಜಿ.ಪಂ ಹಾಗೂ ತಾ.ಪಂ.ಗಳಿಗೆ ಅನುದಾನ ಹಂಚಿಕೆ ಮಾಡಲು ಸಂಪನ್ಮೂಲ ಕ್ರೋಢೀಕರಣ, ಅಧಿಕಾರ ವಿಕೇಂದ್ರೀಕರಣದ ಅನುಷ್ಠಾನಕ್ಕೆ ಪಂಚಾಯತ್‌ರಾಜ್ ಸ್ವಾಯತ್ತತೆ, ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಅಭಿವೃದ್ಧಿ ಕೇಂದ್ರಿತ ಆಡಳಿತ, ಪ್ರತಿಯೊಬ್ಬರ ಸಬಲೀಕರಣ ಹಾಗೂ ಸದೃಢ ಸಮಾಜಕ್ಕೆ ಸಾಮಾಜಿಕ ವಿಕಾಸ ಮತ್ತು ಸದೃಢ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಲು ಅಂತ್ಯೋದಯ ಕಾರ್ಯಕ್ರಮ ಜಾರಿ ಮಾಡುವ ಆಶ್ವಾಸನೆ ನೀಡಲಾಗಿದೆ.

ಭರವಸೆಯಲ್ಲ ನಮ್ಮ ಬದ್ಧತೆ:

ತಾಲೂಕು ಪಂಚಾಯಿತಿಗಳಿಗೆ 5 ಕೋಟಿ, ಜಿ.ಪಂ.ಗೆ ಕನಿಷ್ಠ 10 ಕೋಟಿ ವಾರ್ಷಿಕ ಅನುದಾನ ನೀಡಲು ಸರ್ಕಾರದ ಮೇಲೆ ಒತ್ತಡ, ಸದಸ್ಯರ ಗೌರವಧನ ಹೆಚ್ಚಳಕ್ಕೆ ಪ್ರಾಮಾಣಿಕ ಯತ್ನ, ಆಡಳಿತ ಮತ್ತು ಕಾಮಗಾರಿಗಳ ಪರಿಶೀಲನೆಗಾಗಿ ಜಾಗೃತಿ ಸಮಿತಿ ರಚನೆ ಮಾಡುವುದು, ಡಿಜಿಟಲ್ ಇಂಡಿಯಾ ಯೋಜನೆಯಡಿ ಪ್ರತಿಯೊಂದು ಪಂಚಾಯತ್‌ರಾಜ್ ಕೆಲಸಗಳನ್ನು ಡಿಜಿಟಲೀಕರಣ ಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಮೇಲುಸ್ತುವಾರಿ ಸಮಿತಿ ರಚನೆ, ಪ್ರತಿ ತಾಲೂಕಿನ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭತ ಸೌಕರ್ಯಗಳಿಗೆ ಒತ್ತು, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದವರಿಗೆ ಉಚಿತ ತರಬೇತಿ ಕೇಂದ್ರ ಸ್ಥಾಪನೆ ಮಾಡುವುದಾಗಿ ತಿಳಿಸಲಾಗಿದೆ.
ಕುಡಿಯುವ ನೀರು, ರಸ್ತೆ, ಸ್ವಚ್ಚತೆ, ಆಸ್ಪತ್ರೆ, ಬೀದಿ ದೀಪ ಅಳವಡಿಕೆಗೆ ಆದ್ಯತೆ, ಲಂಬಾಣಿ ತಾಂಡಾ, ಗಿರಿಜನರ ಹಾಡಿಗಳು, ಗೊಲ್ಲರಹಟ್ಟಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ವಿಶೇಷ ಯೋಜನೆ ಹಮ್ಮಿಕೊಳ್ಳಲಾಗುವುದು.
ಕೃಷಿಯೇ ರೈತನ ಬೆನ್ನೆಲುಬಾಗಿರುವುದರಿಂದ ಪ್ರಧಾನಮಂತ್ರಿ, ಬೆಳೆ ವಿಮೆ ಯೋಜನೆಗೆ ಹೆಚ್ಚು ವಿಶೇಷ ಗಮನ, ಕೃಷಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ಅಳವಡಿಕೆ, ಎಲ್ಲ ತಾಲೂಕು ಕೇಂದ್ರಗಳಲ್ಲಿ ವಿದ್ಯುನ್ಮಾನ ಮಾರುಕಟ್ಟೆ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ, ಅನಾಥ ಮಕ್ಕಳ ಕಲ್ಯಾಣಕ್ಕೆ ಸಂಘ ಸಂಸ್ಥೆಗಳ ಮೂಲಕ ಪ್ರತಿ ಜಿಲ್ಲೆಯಲ್ಲಿ ವಿಶೇಷ ಯೋಜನೆ, ಗ್ರಾಮೀಣ ಮಹಿಳೆಯರ ವ್ಯವಹಾರ ಗುಂಪುಗಳಿಗೆ ಪ್ರೋತ್ಸಾಹ ನೀಡಲಾಗುವುದು. ಹಳ್ಳಿಗಳಲ್ಲಿ ಬಡತನ ನಿವಾರಿಸಲು ಅಂತ್ಯೋದಯ ಯೋಜನೆ ಜಾರಿ, ಎಲ್ಲ ಹಳ್ಳಿಗಳಿಗೂ ರಸ್ತೆ ನಿರ್ಮಾಣ, ಪ್ರತಿಯೊಂದು ಸರ್ಕಾರಿ ಶಾಲೆಗಳ ದುರಸ್ತಿ, ಹೆಚ್ಚುವರಿ ಶಾಲೆಗಳ ನಿರ್ಮಾಣ, ಆಟದ ಮೈದಾನ, ಕುಡಿಯುವ ನೀರು, ಕಾಂಪೌಂಡ್, ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರವೇಶ ಪರೀಕ್ಷೆ ಹಾಗು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ಸ್ಥಾಪನೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳೀಸಲಾಗಿದೆ.
ಫ್ಲೋರೈಡ್‌ಯುಕ್ತ ನೀರಿಗೆ ಅಂತ್ಯ ಹಾಡಲು ಹಳ್ಳಿಗಳಲ್ಲಿ ಕುಡಿಯುವ ಶುದ್ದ ನೀರು, ಅಂತರ್ಜಲಮಟ್ಟ ಹೆಚ್ಚಳ, ದೇಸಿ ಹಸು ಸಾಕುವವರಿಗೆ ಹೆಚ್ಚು ಪ್ರೋತ್ಸಾಹ, ಹೆಚ್ಚು -ಹೆಚ್ಚು ಹಾಲು ಉತ್ಪಾದಕರ ಸಂಘಗಳ ಸ್ಥಾಪನೆ, ಎಲ್ಲ ಹಳ್ಳಿಗಳಿಗೂ ಗ್ರಾಮೀಣ ವೈದ್ಯಕೀಯ ಸೇವೆ, ಗ್ರಾಮೀಣ ಭಾಗಗಳಲ್ಲಿ 4ಸೋಲಾರ್ ವಿದ್ಯುತ್ ಮತ್ತು ಎಲ್‌ಇಡಿ ಬಲ್ಬ್ ಅಳವಡಿಕೆ, ಗುಡಿಸಲು ಮುಕ್ತ ಮಾಡಲು ಪ್ರತಿಯೊಬ್ಬರಿಗೂ ವಸತಿ, ಕನ್ನಡ ಮಾಧ್ಯಮದಲ್ಲಿ ಓದಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗು ತಾಲೂಕು ಮಟ್ಟದಲ್ಲಿ ವೈಯಕ್ತಿಕ ಪ್ರಶಸ್ತಿ ನೀಡುವುದು ಸೇರಿದಂತೆ ಹಲವು ಭರವಸೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದೆ.

>> ಕಾಂಗ್ರೆಸ್ಸ್ ವಿರುದ್ಧ ವಾಗ್ದಾಳಿ :

ಬೆಂಗಳೂರು, ಫೆ.6-ಕೇಂದ್ರದಲ್ಲಿ 5 ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ನೈತಿಕತೆ ಇಟ್ಟುಕೊಂಡಿಲ್ಲ. ಜನರಿಗೆ ಟೋಪಿ ಹಾಕಿದ ಪಕ್ಷವೆಂದರೆ ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದರು. ಪಕ್ಷದ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ಟೀಕಾ ಪ್ರಹಾರ ನಡೆಸಿದರು. ಕಳೆದ 6 ದಶಕಗಳ ಅವಧಿಯಲ್ಲಿ ಕಾಂಗ್ರೆಸ್ 57 ವರ್ಷ 41 ದಿನ ಆಡಳಿತ ನಡೆಸಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಜನರು ಆ ಪಕ್ಷಕ್ಕೆ ಅಧಿಕಾರ ನೀಡಿದ್ದರು. ಅಧಿಕಾರದಲ್ಲಿದ್ದ ವೇಳೆ ಜನರಿಗೆ ನಯಾಪೈಸೆಯಷ್ಟೂ ಅನುಕೂಲ ಮಾಡಿಕೊಡದ ಕಾಂಗ್ರೆಸ್ ಯಾವ ನೈತಿಕತೆ ಇಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಪ್ರಶ್ನೆ ಮಾಡಿದರು.
ಇದುವರೆಗೆ ಜನರಿಗೆ ವಂಚನೆ ಮಾಡಿರುವುದನ್ನು ಅರಿತಿರುವ ಕಾಂಗ್ರೆಸ್, ಇದೀಗ ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್, ರಸ್ತೆ ನಿರ್ಮಾಣ ಮಾಡುವುದಾಗಿ ಹೇಳುತ್ತಿದೆ. 32 ವರ್ಷ ದೇಶದ ಚುಕ್ಕಾಣಿ ಒಂದೇ ಕುಟುಂಬದ ಕೈಯಲ್ಲಿತ್ತು. ಆವಾಗ ಈ ಜನರು ನೆನಪಾಗಲಿಲ್ಲವೇ ಎಂದು ಹರಿಹಾಯ್ದರು.
ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡುವ ರಾಜ್ಯ ಸರ್ಕಾರ ಮೊದಲು ತಾವು ಏನು ಮಾಡಿದ್ದೇವೆ ಎಂಬುದನ್ನು ಅರಿಯಲಿ. ಹಿಂದೆ ಬರಗಾಲವಿದ್ದ ವೇಳೆ ಯುಪಿಎ ಸರ್ಕಾರ ರಾಜ್ಯಕ್ಕೆ ಎಷ್ಟು ಮೊತ್ತದ ಹಣವನ್ನು ನೀಡಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ಗೆ ಬಿಜೆಪಿ ಮತ್ತು ಮೋದಿಯನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಈ ಹಿಂದೆ ರಾಜ್ಯದಲ್ಲಿ ಬರಗಾಲವಿದ್ದ ವೇಳೆ ರಾಜ್ಯ ಸರ್ಕಾರ 15 ಸಾವಿರ ಕೋಟಿ ಹಣ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಅಂದು ರಾಜ್ಯಕ್ಕೆ ಬಿಡುಗಡೆಯಾಗಿದ್ದು, 109 ಕೋಟಿ ಹಣ ಮಾತ್ರ. 2009-10ರಲ್ಲಿ 9 ಸಾವಿರ ಕೋಟಿ ಪರಿಹಾರ ಕೇಳಿದರೆ 150 ಕೋಟಿ ಹಣವನ್ನು ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸರ್ಕಾರ ನೀಡಿತ್ತು.
2015-16ರಲ್ಲಿ ರಾಜ್ಯ ಸರ್ಕಾರ 2250 ಕೋಟಿ ಪರಿಹಾರ ಕೇಳಿತ್ತು. ಪ್ರಧಾನಿ ಮೋದಿ ಸರ್ಕಾರ 1540 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಹಾಗಾದರೆ ಯಾವ ಸರ್ಕಾರ ಜನವಿರೋಧಿ ಎಂದು ಪ್ರಶ್ನಿಸಿದರು.
ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿರುವ ಕಾಂಗ್ರೆಸ್‌ನವರು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಆಡಳಿತ ನಡೆಸುವ ನೀವು ಏನು ಮಾಡುತ್ತೀರಿ ಎಂದು ಪ್ರಹ್ಲಾದ್ ಜೋಷಿ ಪ್ರಶ್ನಿಸಿದರು.

Write A Comment