ಕರ್ನಾಟಕ

ತಾರಕಕ್ಕೇರಿದ ನಾಯಕರ ವಾಕ್ಸಮರ : ರಂಗೇರಿದ ಹಳ್ಳಿ ಫೈಟ್

Pinterest LinkedIn Tumblr

halliಬೆಂಗಳೂರು, ಫೆ.6-ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಯ ಎರಡನೆ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ನೂಕು ನುಗ್ಗಲು ಉಂಟಾಯಿತು. ಒಂದೇ ದಿನ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಹನ್ನೆರಡು ಸಾವಿರಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದವು. ನಾಮಪತ್ರ ಸಲ್ಲಿಸಲು ಫೆ.8 ಕೊನೆ ದಿನಾಂಕವಾಗಿದ್ದರೂ ಎರಡನೆ ಹಂತದ ಚುನಾವಣೆ ನಡೆಯುವ ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜ ನಗರ, ಉಡುಪಿ, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಹೆಚ್ಚಾಗಿತ್ತು.

ಅಭ್ಯರ್ಥಿಗಳು ಸರದಿಯಲ್ಲಿ ನಿಂತು ನಾಮಪತ್ರ ಸಲ್ಲಿಸಿದರು. ಇನ್ನೂ ಕೆಲವೆಡೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳಿಗೆ ಬಿ ಫಾರಂವಿತರಿಸಿಲ್ಲ.
ಆದರೂ ಸಂಭಾವ್ಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾರಣ ಕಡೇ ದಿನ ಅಮಾವಾಸ್ಯೆ ಇರುವುದರ ಎಫೆಕ್ಟ್.

ನಿನ್ನೆ ಕೂಡ ಬಹುತೇಕ ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 15 ಜಿಲ್ಲೆಗಳಲ್ಲಿ ಎರಡನೆ ಹಂತದಲ್ಲಿ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಭರಾಟೆಯೊಂದಿಗೆ ಪ್ರಚಾರದ ವೈಖರಿಯೂ ಜೋರಾಗಿದೆ.
ಆರೋಪ ಪ್ರತ್ಯಾರೋಪಗಳ ಅಬ್ಬರ ತೀವ್ರಗೊಂಡಿದ್ದು, ಹಳ್ಳಿ, ಹಳ್ಳಿಗಳಲ್ಲಿ , ಗಲ್ಲಿ ಗಲ್ಲಿಗಳಲ್ಲಿ ಮೈಕಾಸುರನ ಹಾವಳಿ ಆರ್ಭಟಿಸುತ್ತಿದೆ. ಎಲ್ಲಿ ನೋಡಿದರೂ ರಾಜಕೀಯ ಪಕ್ಷಗಳ ಬಂಟಿಂಗ್ಸ್, ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಆಟೋಗಳಲ್ಲಿ ಮೈಕ್ ಕಟ್ಟಿಕೊಂಡು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ವಿವಿಧ ಪಕ್ಷಗಳು ಬ್ಲಾಕ್ ಮತ್ತು ಹೋಬಳಿ ಮಟ್ಟದಲ್ಲಿ ಸಭೆ ಸಮಾರಂಭಗಳನ್ನು ಆಯೋಜಿಸಿ ಕಾರ್ಯಕರ್ತರನ್ನು ಹುರುದಿಂಬಿಸುತ್ತಿರುವುದು ಕಂಡು ಬಂದಿತು. ಇದರಿಂದ ಹಳ್ಳಿಫೈಟ್ ಎಂದೇ ಪರಿಗಣಿಸಿರುವ ಪಂಚಾಯ್ತಿ ಚುನಾವಣೆ ರಂಗೇರತೊಡಗಿದೆ.

ಮೊದಲ ಹಂತದ ಚುನಾವಣೆಗೆ ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಓಲೈಸಲು ಅಭ್ಯರ್ಥಿಗಳು ವಿವಿಧ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಚುನಾವಣೆ ಕಣದಲ್ಲಿರುವವರು ಮತದಾರರನ್ನು ಒಲಿಸಿಕೊಳ್ಳಲು ನಾನಾ ತಂತ್ರ ಅನುಸರಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ತೃಪ್ತಿ ಪಡಿಸಲು ನಿತ್ಯ ಮದ್ಯ ಸಮಾರಾಧನೆ ಎಗ್ಗಿಲ್ಲದೆ ನಡೆಯುತ್ತಿದೆ. ಮನೆ ಮನೆಗೆ ತೆರಳಿ ಮತಯಾಚನೆ ಮಾಡುವವರಿಗೆ ಸಂಜೆಯಾಗುತ್ತಿದ್ದಂತೆ ಬಾಡೂಟ, ಮದ್ಯ ನೀಡಲಾಗುತ್ತಿದೆ. ಮತದಾರರಿಗೆ ತೋಟದ ಮನೆ ಮುಂತಾದ ಕಡೆಗಳಲ್ಲಿ ಭರ್ಜರಿ ಪಾರ್ಟಿಗಳು ನಡೆಯುತ್ತಿವೆ. ನಮ್ಮ ಕ್ಷೇತ್ರಗಳಲ್ಲಿ ಆ ಸಮಸ್ಯೆಗಳಿವೆ, ಈ ಸಮಸ್ಯೆಗಳಿವೆ ಎಂದು ಹೇಳಿಕೊಳ್ಳುತ್ತಿದ್ದ ಬಹುತೇಕ ಮಂದಿ ಪಾರ್ಟಿಗಳ ಮೊರೆ ಹೋಗುತ್ತಿದ್ದಾರೆ.

ಈ ಚಿತ್ರಣ ರಾಜ್ಯದ ಬಹುತೇಕ ಕಡೆ ಕಂಡು ಬರುತ್ತಿದೆ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ಅಭ್ಯರ್ಥಿಗಳು ಹೇಗಾದರೂ ಸರಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಹಣ ಹಾಗೂ ಉಡುಗೊರೆಗಳನ್ನು ನೀಡಲು ಮುಂದಾಗಿದ್ದಾರೆ. ಹಲವೆಡೆ ಮತದಾರರ ಗುರುತಿನ ಚೀಟಿ ಪಡೆದು ಪ್ರತಿ ಮತಕ್ಕೆ ನಿಗದಿತ ಹಣ ನೀಡುತ್ತಿರುವುದು ಕೇಳಿ ಬಂದಿದೆ.

Write A Comment