ಎಚ್.ಡಿ.ಕೋಟೆ, ಫೆ.6- ನಾನು ಮೇಲೆ ಮೇಲೆ ಹೋಗುತ್ತಿದ್ದೇನೆ. ಸಂಪರ್ಕ ಸಿಗುವುದು ಕಷ್ಟ. ಆಗಾಗ ಮಾತನಾಡಲು ಆಗೊಲ್ಲ ಎಂದಿದ್ದ….. ಈಗ ಪೂರ್ತಿ ಮೇಲೇ ಹೋದ…. ಹೀಗೆ ದುಃಖದಿಂದ ಕಣ್ಣೀರು ಸುರಿಸುತ್ತಾ ನುಡಿದವರು ಸಿಯಾಚಿನ್ ಹಿಮಪಾತದಲ್ಲಿ ಕಣ್ಮರೆಯಾಗಿರುವ ಯೋಧ ಪಟ್ಟಣದ ವಾಸಿ ಮಹೇಶ್ ಅವರ ತಾಯಿ ಸರ್ವಮಂಗಳ. ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಸಂಭವಿಸಿದ ರುದ್ರ ಭಯಂಕರ ಹಿಮಪತಾದಲ್ಲಿ ಕಣ್ಮರೆಯಾಗಿರುವ ಯೋಧರಲ್ಲಿ ಒಬ್ಬರಾಗಿರುವ ಪಟ್ಟಣದ ವಾಸಿ ಮಹೇಶ್ ಅವರ ಮನೆಗೆ ಸಂಸದ ಪ್ರತಾಪಸಿಂಹ ಅವರು ಭೇಟಿ ನೀಡಿದ ವೇಳೆ ತಾಯಿ ಮೇಲಿನಂತೆ ಹೇಳುತ್ತಾ ಕಣ್ಣೀರು ಹಾಕಿದರು.
ಆಗಾಗ ಕರೆ ಮಾಡಿ ನಮ್ಮ ಯೋಗಕ್ಷೇಮ ವಿಚಾರಿಸುತ್ತಿದ್ದ. ಮಾರ್ಚ್ ತಿಂಗಳಲ್ಲಿ ಆತನಿಗೆ ಮದುವೆ ಮಾಡಲು ನಿರ್ಧರಿಸಿದ್ದೆವು. ಅಷ್ಟರಲ್ಲಿ ವಿಧಿ ಆತನನ್ನು ತನ್ನ ಬಳಿಗೆ ಎಳೆದುಕೊಂಡಿದೆ ಎಂದು ಮಮ್ಮಲ ಮರುಗಿದರು.
ಮನೆಯಲ್ಲಿ ಇದ್ದ ಚಿಕ್ಕಪ್ಪನ ಮಗ ಸಂತೋಷ್, ಎಷ್ಟೋ ಯೋಧರು ಈ ರೀತಿ ಕಣ್ಮರೆಯಾದವರು ಹಲವು ದಿನಗಳು, ತಿಂಗಳುಗಳ ನಂತರ ಬದುಕಿ ಬಂದಿದ್ದಾರೆ. ಅಣ್ಣ ಮಹೇಶ್ ಕೂಡ ಬದುಕಿರುವ ನಂಬಿಕೆ ಇದೆ. ಆತ ಬಂದೇ ಬರುತ್ತಾನೆ ಎಂದು ದುಃಖದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದ ಸಂಸದ ಪ್ರತಾಪಸಿಂಹ ಅವರು, ಯೋಧನ ದೇಹ ಪತ್ತೆ ಅಸಾಧ್ಯವಾಗಿದ್ದು, ಇತರೆ ಮಾಹಿತಿಗಳನ್ನು ಆಗಾಗ್ಗೆ ಮೊಬೈಲ್‌ಗೆ ಕರೆ ಮಾಡಿ ತಿಳಿಸುವುದಾಗಿ ಹೇಳಿದರು.
ರಕ್ಷಣಾ ಸಚಿವರ ಆಪ್ತ ಸಹಾಯಕರು ನಿಮಗೆ ಆಗಾಗ್ಗೆ ಮಾಹಿತಿ ನೀಡುತ್ತಾರೆ. ನನಗೆ ಬಂದ ಮಾಹಿತಿಯನ್ನು ನೀಡುತ್ತಿರುತ್ತೇನೆ ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ನಂಜುಂಡಯ್ಯ ಇದ್ದರು.
ಸಾಲ ಮಾಡಿ ಸೇನೆ ಸೇರಿದ್ದ:
ಪಿಯುಸಿ ವ್ಯಾಸಂಗ ಮಾಡಿರುವ ಮಹೇಶ್ ದೇಶ ಸೇವೆ ಮಾಡಬೇಕೆಂಬ ಆಸೆಯಿಂದ 500ರೂ. ಸಾಲ ಮಾಡಿ ಮಂಡ್ಯಕ್ಕೆ ತೆರಳಿ ಸಂದರ್ಶನ ಎದುರಿಸಿ ಸೇನೆ ಸೇರಿದ್ದ ಎಂದು ಕುಟುಂಬದವರು ಸ್ಮರಿಸಿದರು. 2005ರಲ್ಲಿ ಸೇನೆ ಸೇರಿದ ಮಹೇಶ್ ಅಸ್ಸಾಂ, ಪಂಜಾಬ್, ಜಮ್ಮು-ಕಾಶ್ಮೀರ ಸೇರಿದಂತೆ ಇತರೆ ಸ್ಥಳಗಳಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಪ್ರಸ್ತುತ ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದರು.