ಬೆಂಗಳೂರು, ಫೆ. ೪- ತಾಂಜೇನಿಯಾ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇನ್ವೆಸ್ಟ್ ಕರ್ನಾಟಕ ಸಮಾವೇಶದ ಎರಡನೇ ದಿನವಾದ ಇಂದು ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿದೆ. ದೂರನ್ನು ತಕ್ಷಣ ದಾಖಲಿಸದ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ವಿದೇಶಾಂಗ ಸಚಿವಾಲಯಕ್ಕೆ ವರದಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ಪ್ರಕರಣದ ಸಮಗ್ರ ವರದಿಯನ್ನು ಮುಖ್ಯ ಕಾರ್ಯದರ್ಶಿಯವರು ಕೇಂದ್ರದ ವಿದೇಶಾಂಗ ಸಚಿವಾಲಯಕ್ಕೆ ಇಂದು ಕಳುಹಿಸುವರು ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ಹೈಕಮಾಂಡ್ ವರದಿ ಕೇಳಿದೆಯೇ ಎಂಬ ಪ್ರಶ್ನೆಯನ್ನು ತಳ್ಳಿ ಹಾಕಿದ ಅವರು, ಹೈಕಮಾಂಡ್ ಯಾವುದೇ ವರದಿ ಕೇಳಿಲ್ಲ. ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿ ಪ್ರಕಟವಾಗಿದೆ. ಈ ಹಿಂದೆ ಡಿವೈಎಸ್ಪಿ ಅನುಪಮಾ ಶಣೈ ವರ್ಗಾವಣೆ ಪ್ರಕರಣದಲ್ಲೂ ಹೈಕಮಾಂಡ್ ವರದಿ ಕೇಳಿದೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಹೈಕಮಾಂಡ್ ಆ ವರದಿಯನ್ನು ಕೇಳಿರಲಿಲ್ಲ. ಕೂಡ್ಲಿಗಿಯ ಡಿವೈಎಸ್ಪಿ ಅನುಪಮಾ ಶಣೈರವರನ್ನು ಸರ್ಕಾರ ವರ್ಗಾವಣೆ ಮಾಡಿರಲಿಲ್ಲ. ಓಓಡಿ ಮೇಲೆ ಬಿಜಾಪುರದ ಇಂಡಿಗೆ ವರ್ಗಾಯಿಸಿತ್ತು. ಸಚಿವ ಪರಮೇಶ್ವರ್‌ನಾಯಕ್‌ರವರಿಗೆ ಸರಿಯಾದ ಮಾಹಿತಿ ಇರದ ಅವರು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳನ್ನು ಆಡಿದ್ದಾರೆ ಎಂದರು.