ಕರ್ನಾಟಕ

ಬೌಲರ್‌ಗಳ ಕೊರತೆ ನೀಗಲು ಬೌಲಿಂಗ್ ಫೌಂಡೇಷನ್‌ಗೆ ಚಾಲನೆ

Pinterest LinkedIn Tumblr

kscalogoಬೆಂಗಳೂರು, ಫೆ. ೪- ರಾಜ್ಯದಲ್ಲಿ ಬೌಲಿಂಗ್ ಪ್ರತಿಭೆಗಳನ್ನು ಸೃಷ್ಟಿಸುವ ಉದ್ದೇಶದಿಂದ ಐಡಿಬಿಐ ಫೆಡರಲ್ ಲೈಫ್ ಇನ್ಸುರೆನ್ಸ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದಲ್ಲಿ ಬೌಲಿಂಗ್ ಫೌಂಡೇಷನ್ ಒಂದನ್ನು ಸ್ಥಾಪಿಸಲಾಗಿದೆ ಎಂದು ಮುಂಬೈಯ ಮಾಜಿ ಬೌಲರ್ ಹಾಗೂ ಐಡಿಬಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಘ್ನೇಶ್ ಶಹಾನೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಇನ್ನಷ್ಟು ವೇಗದ ಬೌಲರ್‌ಗಳು, ಸ್ಪಿನ್ನರ್‌ಗಳು ಸೃಷ್ಟಿಯಾಗಬೇಕು. ಅದಕ್ಕಾಗಿ ತರಬೇತಿ ಸಂಸ್ಥೆಯ ಅಗತ್ಯವಿರುವುದನ್ನು ಮನಗಂಡು ಈ ಫೌಂಡೇಷನ್ ಅನ್ನು ಸ್ಥಾಪಿಸಲಾಗಿದೆ. ಈಗಾಗಲೇ 26 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 15 ಮಂದಿ ಸ್ಪಿನ್ ಬೌಲಿಂಗ್ ಆಸಕ್ತರಾಗಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಆಸ್ಟ್ರೇಲಿಯಾದ ವೇಗದ ಬೌಲರ್ ಜೆಫ್ ತಾಮ್‌ಸನ್ ಅವರು ಮುಖ್ಯ ತರಬೇತುದಾರರಾಗಿದ್ದು, ಭಾರತೀಯ ಮಾಜಿ ಕ್ರಿಕೆಟಿಗರಾದ ರೋಜರ್ ಬಿನ್ನಿ ಮತ್ತು ಸ್ಪಿನ್ನರ್ ರಘುರಾಮ್ ಭಟ್ ಅವರು ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ ಎಂದು ಹೇಳಿದರು.
ನಾನು ಒಬ್ಬ ಬೌಲರ್ ಆಗಿದ್ದೆ. ಯಾವುದೇ ಉಪಬೌಲರ್‌ನ ಬೆಳವಣಿಗೆಗೆ ತರಬೇತಿ ಅತ್ಯಗತ್ಯ. ಪ್ರತಿಭಾವಂತ ತರಬೇತಿದಾರರಿಂದ ತರಬೇತಿ ದೊರೆತರೆ, ಅತ್ಯುತ್ತಮ ಬೌಲರ್‌ಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಫೌಂಡೇಷನ್‌ನಲ್ಲಿ ತರಬೇತಿ ಪಡೆದವರು ಭಾರತೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಫ್ ತಾಮ್‌ಸನ್ ಮಾತನಾಡಿ, ಮುಂಬೈನ ಬೌಲಿಂಗ್ ಫೌಂಡೇಷನ್ ಮಾದರಿಯಲ್ಲಿ ಕರ್ನಾಟಕದಲ್ಲೂ ಫೌಂಡೇಷನ್ ಸ್ಥಾಪನೆಯಾಗಿರುವುದು ಸಂತಸ ತಂದಿದೆ. ಮುಂಬೈನ ಫೌಂಡೇಷನ್ ನನಗೆ ಸಾಕಷ್ಟು ಅನುಭವ ದೊರೆತಿದೆ. ಕರ್ನಾಟಕದ ಪ್ರತಿಭೆಗಳನ್ನು ಬೆಳೆಸುವ ಬದ್ಧತೆ ಹೊಂದಿದ್ದೇನೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಮಾತನಾಡಿ, ರಾಜ್ಯದಲ್ಲಿ ಇಂತಹ ಅಕಾಡೆಮಿಯ ಅಗತ್ಯವಿತ್ತು. ಈಗ ಐಡಿಬಿಐ ಅದನ್ನು ಪೂರೈಸಿದೆ. ಆಟಗಾರರಿಗೆ ಫಿಟ್‌ನೆಟ್ ಅತ್ಯಗತ್ಯ. ಈ ಬಗ್ಗೆಯೂ ಫೌಂಡೇಷನ್ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
ಇದೇ ವೇಳೆ ಕರ್ನಾಟಕದ 19ರ ಹರೆಯದೊಳಗಿನ ವೇಗಿಗಳಾದ ರುಚಿರ್ ಜೋಷಿ ಮತ್ತು ಶಶಾಂಕ್ . ಕೆ. ಅವರಿಗೆ ಐಡಿಬಿಐನ ಫ್ರಾಂಕ್ ಟೈಸನ್ ವಿದ್ಯಾರ್ಥಿವೇತನ ನೀಡಿ ಸನ್ಮಾನಿಸಲಾಯಿತು.
ಈ ಇಬ್ಬರೂ ಆಟಗಾರರಿಗೆ ತಲಾ 2 ಲಕ್ಷ ರೂ. ಗಳ ಚೆಕ್ ವಿತರಿಸಲಾಯಿತು.
ಈ ಇಬ್ಬರೂ ಆಟಗಾರರು ಬಿಹಾರ ಅಂಡರ್ 19 ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.
ಕಾರ್ಯಕ್ರಮದಲ್ಲಿ ರೋಜರ್ ಬಿನ್ನಿ ಮತ್ತು ರಘುರಾಮ್ ಭಟ್ ಹಾಜರಿದ್ದರು.

Write A Comment