ಕರ್ನಾಟಕ

ನಗ್ನ ಮೆರವಣಿಗೆ ನಡೆಸಿಲ್ಲ, ಇದು ಜನಾಂಗೀಯ ಹಲ್ಲೆಯೂ ಅಲ್ಲ; ಪರಂ

Pinterest LinkedIn Tumblr

paramಬೆಂಗಳೂರು: ವಿದೇಶಿ ವಿದ್ಯಾರ್ಥಿನಿಯ ಬಟ್ಟೆ ಹರಿದಿದ್ದಾರೆ ಎಂಬುದು ಸುಳ್ಳು. ಯುವತಿಯನ್ನು ನಗ್ನಗೊಳಿಸಿ ಮೆರವಣಿಗೆ ನಡೆಸಿಲ್ಲ. ಅಲ್ಲದೇ ಇದು ಜನಾಂಗೀಯ ಹಲ್ಲೆಯೂ ಅಲ್ಲ.(ತಾಂಜೇನಿಯಾ ಯುವತಿ ಮೇಲೆ ಹಲ್ಲೆ, ಕಾರಿಗೆ ಬೆಂಕಿ) ರಾಜ್ಯದಲ್ಲಿ 12 ಸಾವಿರ ವಿದೇಶಿ ವಿದ್ಯಾರ್ಥಿಗಳಿದ್ದಾರೆ. ವಿದೇಶಿ ವಿದ್ಯಾರ್ಥಿಗಳ ರಕ್ಷಣೆಗೆ ನಾವು ಬದ್ಧ. ವಿದೇಶಿ ವಿದ್ಯಾರ್ಥಿಗಳು ಕೂಡಾ ಈ ದೇಶದ ಕಾನೂನನ್ನು ಗೌರವಿಸಬೇಕು. ರಾಜ್ಯ ಸರ್ಕಾರ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಾಂಜೇನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರ ನೀಡಿದ್ದಾರೆ

ಬೆಂಗಳೂರಿನ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಾಂಜೇನಿಯಾ ದೇಶದ ಯುವತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರು ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ತಾಂಜೇನಿಯಾ ಯುವತಿ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಕೇಂದ್ರ ಗೃಹಸಚಿವಾಲಯ ವಿಸ್ತೃತ ವರದಿ ಕೇಳಿದೆ. ವಿದೇಶಾಂಗ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಪೂರ್ಣ ಮಾಹಿತಿ ನೀಡಲಿದೆ ಎಂದರು. ಹಲ್ಲೆ ಪ್ರಕರಣದಲ್ಲಿ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಹೆಸರಘಟ್ಟ ರಸ್ತೆಯಲ್ಲಿ ನಡೆದಿದ್ದ ಅಪಘಾತದಿಂದ ಇಷ್ಟೆಲ್ಲಾ ನಡೆದಿದೆ. ಸೂಡಾನ್ ವಿದ್ಯಾರ್ಥಿ ಇಸ್ಮಾಯಿಲ್ ಕಾರು ಡಿಕ್ಕಿ ಹೊಡೆದಿತ್ತು.  ಅಪಘಾತ ನಡೆಯದಿದ್ದರೆ ಗಲಾಟೆಯೇ ನಡೆಯುತ್ತಿರಲಿಲ್ಲ. ವಿದ್ಯಾರ್ಥಿಗಳು ಕೂಡಾ ಸಂಯಮದಿಂದ ವರ್ತಿಸಬೇಕು ಎಂದು ಗೃಹಸಚಿವರು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ಯುವತಿಯ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ. ಅಲ್ಲದೇ ಯಾರೂ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
-ಉದಯವಾಣಿ

Write A Comment