ಬೆಂಗಳೂರು : ನಿರ್ಮಾಪಕ ,ನಿರ್ದೇಶಕ ದಿನಕರ್ ತೂಗುದೀಪ ಅವರ ವಿರುದ್ದ ದಾಖಲಿಸಿದ್ದ ಕೊಲೆ ಬೆದರಿಕೆ ದೂರನ್ನು ಹಿಂಪಡೆಯುವುದಾಗಿ ಗುರುವಾರ ಸಂಜೆ ಬುಲೆಟ್ ಪ್ರಕಾಶ್ ಹೇಳಿದ್ದಾರೆ.
ಸ್ಯಾಂಡಲ್‌ವುಡ್‌ನ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಿನಕರ್ ತೂಗುದೀಪ್ ಮತ್ತು ಪಿಸ್ತಾ ಸೀನು ವಿರುದ್ದ ಬುಲೆಟ್ ಪ್ರಕಾಶ್ ಕೊಲೆ ಬೆದರಿಕೆ ದೂರು ದಾಖಲಿಸಿದ್ದರು.
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಗಳ ಸಮ್ಮುಖದಲ್ಲಿ ದಿನಕರ್ ಮತ್ತು ಬುಲೆಟ್ ಪ್ರಕಾಶ್ ಅವರ ನಡುವೆ ಸಂಧಾನ ಮಾತುಕತೆ ನಡೆದಿದೆ.
ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನಕರ್ ತೂಗುದೀಪ್ ‘ನಮ್ಮ ನಡುವೆ ಕೆಲ ಗೊಂದಲಗಳಿದ್ದುಅವೆಲ್ಲವೂ ಈಗ ಪರಿಹಾರವಾಗಿದೆ. ಶೀಘ್ರ ಬುಲೆಟ್ ಪ್ರಕಾಶ್ ದೂರು ವಾಪಾಸು ಪಡೆಯಲಿದ್ದಾರೆ’ ಎಂದು ಹೇಳಿದರು.
ಕೆಂಪಾಪುರದ ರಾಜನ್ ಸ್ಟುಡಿಯೋ ಬಳಿ ದಿನಕರ್ ಮತ್ತು ಆವರೊಂದಿಗಿದ್ದ ಕೆಲವರು ನನ್ನ ಮೇಲೆ ಹಲ್ಲೆನಡೆಸಿ, ಬೈದು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಬುಲೆಟ್ ಪ್ರಕಾಶ್ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ದರ್ಶನ್ ಅವರೊಂದಿಗೆ ಸಿನೆಮಾವೊಂದನ್ನು ಮಾಡಲು ಬುಲೆಟ್ ಪ್ರಕಾಶ್ ಮಾತುಕತೆ ನಡೆಸಿದ್ದರು. ಆದರೆ ಈ ಬಗ್ಗೆ ದಿನಕರ್ ಅವರು ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಚಿತ್ರದ ಮಹೂರ್ತ ಸಮಾರಂಭದಲ್ಲಿ ನಿಂದಿಸಿ ಮಾತನಾಡಿದ್ದರು.
ದಿನಕರ್ ಮಾತಿನಿಂದ ಬೇಸರಗೊಂಡಿದ್ದ ನಾನು ದಿನಕರ್‌ಗೆ ಕರೆ ಮಾಡಿ ಭೇಟಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಿ ಕೆಂಪಾಪುರದ ರಾಜನ್ ಸ್ಟುಡಿಯೋ ಬಳಿ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದೆ. ಈ ವೇಳೆ ಮಾತುಕತೆ ನಡೆಯುತ್ತಿದ್ದಂತೆ ನನಗೆ ಪಿಸ್ತಾ ಸೀನ ಹಲ್ಲೆ ನಡೆಸಿದ್ದು ಪ್ರತಿಯಾಗಿ ನಾನೂ ಒಂದೇಟು ವಾಪಾಸು ನೀಡಿದ್ದೇನೆ.ಬಳಿಕ ದಿನಕರ್ ಸೇರಿದಂತೆ ಮೂವರು ನನ್ನನ್ನು ಕೊಲೆ ಮಾಡುವುದಾಗಿ ಬೆದರಿಸಿದರು ಎಂದು ಬುಲೆಟ್ ಪ್ರಕಾಶ್ ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಿದ್ದರು.
ಒಟ್ಟಿನಲ್ಲಿ ದರ್ಶನ್ ಅವರಹಲವು ಚಿತ್ರಗಳಲ್ಲಿ ಖಾಯಂ ಹಾಸ್ಯನಟನಾಗಿ ಕಾಣಿಸಿಕೊಂಡು ತೂಗುದೀಪ ಕುಟುಂಬಕ್ಕೆ ಆಪ್ತರಾಗಿದ್ದ ಬುಲೆಟ್ ಪ್ರಕಾಶ್ ನೀಡಿರುವ ದೂರು ಅಚ್ಚರಿ ಮೂಡಿಸಿತ್ತು .
ದೂರಿನ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿರುವ ದಿನಕರ್ ತೂಗುದೀಪ್ ‘ಬುಲೆಟ್ ಪ್ರಕಾಶ್‌ಗೆ ನಾನು ಕೊಲೆ ಬೆದರಿಕೆ ಹಾಕಿಲ್ಲ ,ಅವರು ಸುಳ್ಳು ದೂರು ದಾಖಲಿಸಿದ್ದಾರೆ’ ಎಂದು ಹೇಳಿದ್ದರು.
-ಉದಯವಾಣಿ