ಮೀರತ್ : ಮೀರತ್ ಜಿಲ್ಲೆಯ ಲಿಹಸಾರಿ ಎಂಬಲ್ಲಿ 16 ವರ್ಷದ ಹುಡುಗಿಯನ್ನು ನೆರೆಮನೆಯ ತರುಣನೋರ್ವ ಚೂರಿ ತೋರಿಸಿ ಪ್ರಾಣ ಭಯ ಒಡ್ಡಿ ಅತ್ಯಾಚಾರಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹುಡುಗಿಯು ನೆರೆಮನೆಯಾತನ ಮನೆಗೆ ಯಾವುದೋ ಕಾರಣಕ್ಕೆ ಹೋಗಿದ್ದಳು. ಅಲ್ಲಿ ಆಕೆಗೆ ಕುಡಿಯಲು ಅಮಲು ಬೆರೆಸಿದ ಚಹಾ ಕೊಡಲಾಯಿತು. ಅದನ್ನು ಕುಡಿದಾಕ್ಷಣ ಆಕೆಗೆ ಸ್ಮತಿ ತಪ್ಪಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ತರುಣನು ಆಕೆಯ ಮೇಲೆ ಅತ್ಯಾಚಾರ ಎಸಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಲ್ಲಿ ದಾಖಲಿಸದಂತೆ ತಮ್ಮ ಮೇಲೆ ಒತ್ತಡ ಹೇರಲಾಯಿತಲ್ಲದೆ ರಾಜಿ ಮಾತುಕತೆಗೆ ಒತ್ತಾಯಿಸಲಾಯಿತು ಎಂದು ಹುಡುಗಿಯ ಕುಟುಂಬದವರು ಹೇಳಿದ್ದಾರೆ.
ಅತ್ಯಾಚಾರಕ್ಕೆ ಗುರಿಯಾದ ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ತನಕ ಆರೋಪಿಯನ್ನು ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ.
-ಉದಯವಾಣಿ