ಮುಜಫರಾಬಾದ್ : ಭಾರತದ ಪಂಜಾಬಿನ ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ದಾಳಿ ನಡೆಸಿ ಏಳು ಮಂದಿ ಭಾರತೀಯ ಯೋಧರನ್ನು ಹತ್ಯೆಗೈದ “ಜಿಹಾದಿಗಳ ಸಾಹಸವನ್ನು’ ಮುಂಬಯಿ ಉಗ್ರ ದಾಳಿಯ ರೂವಾರಿಯಾಗಿರುವ ಜಮಾತ್ ಉದ್ ದಾವಾ ಸಮೂಹದ ಸ್ಥಾಪಕ ಹಾಫೀಜ್ ಸಯೀದ್ ಪ್ರಶಂಸಿಸಿದ್ದಾನೆ. ಪಠಾಣ್‌ಕೋಟ್ ಒಂದೇ ಅಲ್ಲ, ಈ ಬಗೆಯ ಇನ್ನೂ ಹಲವು ಉಗ್ರ ದಾಳಿಗಳು ಭಾರತದ ಮೇಲೆ ನಡೆಯಲಿದೆ ಎಂದಾತ ಎಚ್ಚರಿಸಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 1,000 ಜನರು ಸೇರಿದ್ದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಯೀದ್, “ಕಾಶ್ಮೀರದಲ್ಲಿ ಭಾರತದ ಎಂಟು ಲಕ್ಷ ಸೈನಿಕರು ಕಾಶ್ಮೀರಿಗಳ ಮೇಲೆ ಜನಾಂಗೀಯ ಹತ್ಯೆಯಲ್ಲಿ ತೊಡಗಿರುವಾಗ ಇದರಿಂದ ಸಂತ್ರಸ್ತರಾದ ಜಿಹಾದಿಗಳು ಪಠಾಣ್‌ಕೋಟ್ ನಂತಹ ದಾಳಿಗಳನ್ನು ನಡೆಸುವುದರಲ್ಲಿ ತಪ್ಪೇನಿದೆ ? ಅಂತಹ ಉಗ್ರ ದಾಳಿಗಳನ್ನು ನಡೆಸುವುದು ಅವರ ಹಕ್ಕು’ ಎಂದು ಹೇಳಿದ್ದಾನೆ.
ಮುಂಬಯಿ ಮೇಲಿನ ಉಗ್ರ ದಾಳಿಯ ಹೊರತಾಗಿಯೂ ಪಾಕಿಸ್ಥಾನದ ಉದ್ದಗಲದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವ ಹಾಫೀಜ್ ಸಯೀದ್‌ನ ಈ ಭಾಷಣ ಕೇಳಿ ಪ್ರಚೋದಿತರಾದ ಜನರು “ನಾವು ಜಿಹಾದಿ ಹೋರಾಟಕ್ಕೆ ಸಿದ್ಧರಾಗಿದ್ದೇವೆ’ ಎಂದು ಘೋಷಣೆ ಮೊಳಗಿಸಿದರು.
ನೀವು ಈ ವರೆಗೆ ಪಠಾಣ್‌ಕೋಟ್‌ನಂತಹ ಒಂದೇ ದಾಳಿಯನ್ನು ನೋಡಿದ್ದೀರಿ; ಇನ್ನು ಸದ್ಯದಲ್ಲೇ ಈ ಬಗೆಯ ಹಲವು ಉಗ್ರ ದಾಳಿಗಳನ್ನು ಕಾಣಲಕ್ಕಿದ್ದೀರಿ ಎಂದು ಸಯೀದ್ ಬೆಂಕಿ ಉಗುಳಿದ್ದಾನೆ.
-ಉದಯವಾಣಿ