ಬೆಂಗಳೂರು, ಫೆ.2-ರಾಜ್ಯದ 29 ಸಾವಿರ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಮುಂದಿನ 3 ವರ್ಷಗಳಿಗೆ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಭರವಸೆ ಈಡೇರಿಸಲು ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಪ್ರಯುಕ್ತ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ 165 ಭರವಸೆಗಳ ಪ್ರಣಾಳಿಕೆಯಲ್ಲಿ ಈಗಾಗಲೇ ನೂರಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದೆ ಎಂದರು.
ಪಕ್ಷದ ಬಜೆಟ್ ಪುಸ್ತಕವನ್ನು ಓದಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರಣಾಳಿಕೆಯೆಂದರೆ ಕೇವಲ ಜನರಿಗೆ ನೀಡುವ ಭರವಸೆಯಲ್ಲ. ಅದು ನಮ್ಮ ಬದ್ಧತೆ. ರಾಜ್ಯದಲ್ಲಿರುವ 29 ಸಾವಿರ ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಕೆಗೆ 62ಟಿಎಂಸಿ ನೀರು ಬೇಕಿದೆ. ಇದಕ್ಕಾಗಿ 45 ಸಾವಿರ ಕೋಟಿ ಖರ್ಚು ಮಾಡಬೇಕು. ಒಮ್ಮೆ ಇಷ್ಟೊಂದು ಅನುದಾನ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ 3 ವರ್ಷಗಳಿಗೆ 10 ಸಾವಿರ ಕೋಟಿ ರೂ. ನೀಡುವ ಭರವಸೆ ನೀಡಲಾಗಿದೆ. ಅದನ್ನು ಈಡೇರಿಸಿದ್ದೇವೆ ಎಂದು ಹೇಳಿದರು. 51 ಲಕ್ಷ ಶೌಚಾಲಯ ನಿರ್ಮಿಸಬೇಕಿದ್ದು, ಈಗಾಗಲೇ 21 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ ಎಂದು ಹೇಳಿದರು.
ಬಿಎಸ್‌ವೈಗೆ ಸವಾಲು: ಮಹದಾಯಿ ಮಲಪ್ರಭಾ ನದಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ. ಅವರು ಸವಾಲು ಹಾಕಿರುವಂತೆ ನಾನು ಬರೆದಿರುವ ಪತ್ರವನ್ನು ಬಿಡುಗಡೆ ಮಾಡುತ್ತೇನೆ. ಆನಂತರ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಈ ಮೊದಲು ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚು ಗಳಿಸಿದರೆ, ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ಈಶ್ವರಪ್ಪ ಬಹಿರಂಗ ಸವಾಲು ಹಾಕಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನ ಗಳಿಸಿ, ಬಿಜೆಪಿ 6 ಸ್ಥಾನಗಳಿಸಿತ್ತು. ಆದರೆ ಈಶ್ವರಪ್ಪ ತಮ್ಮ ಸವಾಲನ್ನು ಸ್ವೀಕರಿಸದೆ, ಜನರನ್ನು ದಾರಿ ತಪ್ಪಿಸುವ ಸುಳ್ಳು ಮಾಹಿತಿ ನೀಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಲೇ ಇದ್ದಾರೆ ಎಂದರು.
ಕಾಂಗ್ರೆಸ್‌ಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಬದ್ಧತೆ ಇದೆ. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಲಾಯಿತು. ಬಿಜೆಪಿ -ಜೆಡಿಎಸ್‌ಗೆ ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಇದು ಪ್ರಗತಿ ಪರ ಪ್ರಣಾಳಿಕೆಯಾಗಿದ್ದು, ಸ್ಥಳೀಯ ಸರ್ಕಾರ ವ್ಯವಸ್ಥೆಯ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.