ಜಿನೇವಾ, ಫೆ.2- ಭವಿಷ್ಯದ ಮಾನವ ಜಾತಿಯ ಸಂತಾನವನ್ನೇ ನಾಶಮಾಡುವಂತಹ ಭೀಕರ ಝಿಕಾ ವೈರಾಣುಗಳು ಸ್ಫೋಟಕ ರೀತಿಯಲ್ಲಿ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಈ ಮಾದಕ ರೋಗದ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದೆ. ಇದ್ದಕ್ಕಿದ್ದಂತೆ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಿಸಿಕೊಂಡಿರುವ ಝಿಕಾ ವೈರಾಣು ಪಿಡುಗು ಈಡಿಸ್ ಈಜಿಪ್ಟ್ ಸೊಳ್ಳೆಗಳಿಂದ ಹರಡುತ್ತಿದ್ದು, ಭವಿಷ್ಯದಲ್ಲಿ ಮನುಕುಲದ ಸಂತತಿಯನ್ನೇಹೊಸಕಿ ಹಾಕಲಿದೆ ಎಂಬುದು ಈಗಾಗಲೇ ವಿಜ್ಞಾನಿಗಳ ಸಂಶೋಧನೆಯಿಂದ ತಿಳಿದುಬಂದಿದೆ.
2013-14ರಲ್ಲಿ ಫ್ರಾನ್ಸ್ ಮತ್ತು ಬ್ರೆಜಿಲ್ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಝಿಕಾ ವೈರಾಣು ಅಲ್ಲಿನ ಗರ್ಭಿಣಿಯರ ಮೇಲೆ ಈ ತರಹ ಪರಿಣಾಮ ಬೀರಿತ್ತು ಮತ್ತು ಗರ್ಭಾವಸ್ಥೆಯಲ್ಲಿರುವ ಕೂಸುಗಳ ಮೇಲೆ ದುಷ್ಪರಿಣಾಮ ಉಂಟುಮಾಡಿತ್ತು ಎಂಬುದಕ್ಕೆ ನಿರ್ದಿಷ್ಟ ಸಾಕ್ಷಿಗಳು ಇನ್ನೂ ಲಭ್ಯವಾಗಿಲ್ಲವಾದರೂ ವಿಶ್ವಸಂಸ್ಥೆ ವಿಶ್ವ ಆರೋಗ್ಯ ಸಂಘಟನೆ ಈ ಬಾರಿ ಇಂಥ ಅಭೂತಪೂರ್ವ ಕ್ರಮ ಕೈಗೊಂಡಿದ್ದು, ವಿಶ್ವದಾದ್ಯಂತ ತುರ್ತುಸ್ಥಿತಿ ಘೋಷಿಸಿದೆ.
ವಿಶ್ವ ಆರೋಗ್ಯ ಸಂಘಟನೆ ನಿನ್ನೆ ಜಿನೇವಾದಲ್ಲಿ ಕರೆದಿದ್ದ ಅಂತಾರಾಷ್ಟ್ರೀಯ ಸಮುದಾಯದ ತುರ್ತು ಸಭೆಯಲ್ಲಿ ಫ್ರೆಂಚ್ ಪೊಲಿನೇಷಿಯಾ ಅಧಿಕಾರಿಗಳು, ಝಿಕಾ ವೈರಾಣುಗಳಿಗೂ ಗರ್ಭಾವಸ್ಥೆಯಲ್ಲಿರುವ ಶಿಶುಗಳ ನರ ಮಂಡಲಕ್ಕೂ ಹೆಚ್ಚಿನ ರೀತಿಯ ಸಂಬಂಧ ಇರುವ ಬಗ್ಗೆ ವರದಿ ಸಲ್ಲಿಸಿದರು.
ಫ್ರೆಂಚ್ ಪೊಲಿನೇಷಿಯಾದಲ್ಲಿ ಈಗ್ಗೆ ಎರಡು ವರ್ಷಗಳ ಹಿಂದೆಯೇ ಝಿಕಾ ವೈರಾಣುಗಳು ವ್ಯಾಪಿಸಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅದರ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಫ್ರೆಂಚ್ ಪೊಲಿನೇಷಿಯಾ ಅಧಿಕಾರಿಗಳು ನೀಡಿದ್ದ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸಿದ ಸಮಿತಿ, ಕೊನೆಗೆ ಇದಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂಬುದನ್ನು ನಿರ್ಧರಿಸಲು ನಿನ್ನೆ ರಾತ್ರಿ ತಜ್ಞರ ಸಭೆ ನಡೆಸಲಾಯಿತು. ಈ ಸಭೆ ಮುಂಜಾಗ್ರತೆ ವಹಿಸಲು ಎಲ್ಲ ದೇಶಗಳಿಗೂ ತುರ್ತು ಸಂದೇಶ ಕಳುಹಿಸುವ ಹಾಗೂ ತುರ್ತು ಸ್ಥಿತಿ ಘೋಷಿಸುವ ತೀರ್ಮಾನ ಪ್ರಕಟಿಸಿತು.
ವ್ಯಾಪಕ ಟೀಕೆ: 2014ರ ಮಧ್ಯಭಾಗದಲ್ಲಿ ಜಗತ್ತಿನಾದ್ಯಂತ ಇದೇ ರೀತಿ ಎಬೊಲಾ ರೋಗಾಣುಗಳು ದಾಳಿ ಇಟ್ಟಿದ್ದವು. ಆದರೆ, ವಿಶ್ವಸಂಸ್ಥೆ ಯಾವುದೇ ರೀತಿ ಕ್ರಮ ಕೈಗೊಳ್ಳಲಿಲ್ಲ. ಕೊನೆಗೆ ಎಬೊಲಾ ರೋಗಾಣುಗಳು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ನಂತರವಷ್ಟೆ ಡಬ್ಲ್ಯುಎಚ್‌ಒ ಕ್ರಮಕ್ಕೆ ಮುಂದಾಗಿತ್ತು. ಆದರೆ, ಝಿಕಾ ವೈರಾಣು ವ್ಯಾಪಿಸುತ್ತಿರುವ ಸುದ್ದಿ ಹಬ್ಬುತ್ತಿದ್ದಂತೆಯೇ ಜಾಗತಿಕ ತುರ್ತು ಸ್ಥಿತಿ ಘೋಷಿಸಿರುವುದನ್ನು ಅನೇಕ ರಾಷ್ಟ್ರಗಳು ಟೀಕಿಸಿವೆ. 2014ರಲ್ಲಿ ದಕ್ಷಿಣ ಆಫ್ರಿಕಾದ ರಾಷ್ಟ್ರಗಳಲ್ಲಿ ಎಬೊಲಾ ಕಾಣಿಸಿಕೊಂಡು ಭಾರೀ ಹಾನಿ ಉಂಟುಮಾಡಿತ್ತು.