ಬೆಂಗಳೂರು, ಫೆ.2-ಭಿನ್ನಮತದ ಚಟುವಟಿಕೆ ನಡೆಸುತ್ತಾ ತಮ್ಮ ಮೇಲೆ ಗಂಭೀರ ಆರೋಪ ಮಾಡಿರುವ ಮಾಜಿ ಸಚಿವ ಹಾಗೂ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಅವರ ಜತೆಗಿರುವ ಇತರ ಶಾಸಕರು ಪಕ್ಷ ಬಿಟ್ಟು ಹೊರ ಹೋಗಲಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮೀರ್ ಮತ್ತವರ ಸ್ನೇಹಿತರು ಹೊರ ಹೋದ ಮೇಲೂ ಜೆಡಿಎಸ್ ಪಕ್ಷ ಸದೃಢವಾಗಿರುತ್ತದೆ ಎಂದು ಅವರಿಗೆ ಗೊತ್ತಾಗಲಿದೆ ಎಂದರು. ಜಮೀರ್ ಅವರು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ತಮ್ಮ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಹೆದರೊಲ್ಲ. ಕಾಲವೇ ನಿರ್ಧರಿಸಲಿದೆ. ನಮ್ಮ ಪಕ್ಷದಲ್ಲಿರುವ ಇತರ ಮುಸ್ಲಿಂರು ಅವರ ಆರೋಪಕ್ಕೆ ಉತ್ತರ ನೀಡಿದ್ದಾರೆ ಎಂದರು.
ಪಕ್ಷದ ಸಭೆಗಳಿಗೆ ಬರಲು ಜಮೀರ್ ಅವರಿಗೆ ನೈತಿಕವಾಗಿ ಕಷ್ಟವಾಗುತ್ತದೆ. ಸದ್ಯಕ್ಕೆ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು. ಪಾಠ ಕಲಿಸಬೇಕಿಲ್ಲ: ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರಿಂದ ಜಾತ್ಯತೀತತೆಯ ಪಾಠ ಕಲಿಯಬೇಕಿಲ್ಲ ಎಂದ ಗೌಡರು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾವು ಅಭ್ಯರ್ಥಿಯನ್ನು ಘೋಷಿಸಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಬದಲಿಸಲಾಗಿದೆ. ತಮ್ಮ ಮೇಲೆ ಅವರು ಆರೋಪ ಮಾಡುವುದು ಸರಿಯಲ್ಲ ಎಂದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಬಳಿ ಬಂದು ಎ ಫಾರಂ, ಬಿ ಫಾರಂ ತೆಗೆದುಕೊಂಡು ಹೋಗಿದ್ದರು. ಮೆಕ್ಕಾ ಮದೀನ ಯಾತ್ರೆ ನಂತರ ನಿಲುವು ಬದಲಿಸಿದರು. ಅದಕ್ಕೂ ಮುನ್ನ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದರು. ಅವರು ಮಾಡಿರುವ ಆರೋಪಕ್ಕೆ ಉತ್ತರ ಕೊಡಲು ಸಾಕಷ್ಟು ಶಕ್ತಿಯಿದೆ. ಅವರು ಆಪಾದನೆ ಮಾಡುವುದನ್ನು ನಿಲ್ಲಿಸದಿದ್ದರೆ, ಗೋಡಾ ಹೈ, ಮೈದಾನ್ ಹೈ ಎಂದು ಹೇಳಬೇಕಾಗುತ್ತದೆ ಎಂದು ತಿಳಿಸಿದರು. ಜಾತ್ಯತೀತ ನಿಲುವು ಕಾಂಗ್ರೆಸ್‌ನಿಂದ ದೂರ ಸರಿದು ಸಾಕಷ್ಟು ಕಾಲವಾಗಿದೆ. ಮುಸ್ಲಿಂ ಮತ ಬ್ಯಾಂಕ್ ಕಾಂಗ್ರೆಸ್‌ನಿಂದ ದೂರ ಸರಿಯಿದೆ ಎಂದು ಅವರು ರಾಜಕೀಯವಾಗಿ ತಮ್ಮನ್ನು ಮುಗಿಸಲು ಸಾಧ್ಯವಿಲ್ಲ. ಅದು ದೇವೇಚ್ಛೆ ಎಂದರು.
ಜಾಫರ್ ಶರೀಫ್ ಜಮೀರ್ ಆಪಾದನೆಯಿಂದ ಮನಸ್ಸಿಗೆ ನೋವಾಗಿದೆ. ಅದಕ್ಕಾಗಿ ಪ್ರತಿಕ್ರಿಯೆ ನೀಡಬೇಕಾಯಿತು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಹಾಜರಿದ್ದರು.