ಬೆಂಗಳೂರು, ಜ.24: ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಅಂದು ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಧ್ವಜರೋಹಣ ನೆರವೇರಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಜಿ.ಕುಮಾರ್ನಾಯಕ್ ತಿಳಿಸಿದ್ದಾರೆ.
ಮೈದಾನದಲ್ಲಿಂದು ಪೂರ್ವಭಾವಿ ಸಿದ್ಧತೆ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26ರಂದು ಬೆಳಿಗ್ಗೆ 8.58ಕ್ಕೆ ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದು, ಭಾರತೀಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳನ್ನು ರಾಜ್ಯಪಾಲರಿಗೆ ಪರಿಚಯಿಸಲಾಗುತ್ತದೆ. ಬಳಿಕ ರಾಜ್ಯಪಾಲರು ಪರೇಡ್ ವೀಕ್ಷಿಸಿ, ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ಬಳಿಕ ಜವಹರ್ ನವೋದಯ ಶಾಲಾ ಮಕ್ಕಳು ರಾಷ್ಟ್ರಗೀತೆ ಹಾಡಲಿದ್ದಾರೆ ಎಂದು ತಿಳಿಸಿದರು.
ಕಳೆದ ಮೂರು ದಿನಗಳಿಂದ ಪಥಸಂಚಲನ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ನಡೆಸಲಾಗುತ್ತಿದೆ. ಪಥಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನು ಒಳಗೊಂಡಂತೆ ಕವಾಯತು ಮತ್ತು ಬ್ಯಾಂಡ್ನ ಒಟ್ಟು 61 ತುಕಡಿಗಳನ್ನು ಸುಮಾರು 2100 ಮಂದಿ ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳು ಒಟ್ಟು 4 ಸಾಂಸ್ಕøತಿಕ ಕಾರ್ಯಕ್ರಮ ನಡೆಸಲಿದ್ದು, ಒಟ್ಟು 2550 ಮಕ್ಕಳು ಭಾಗವಹಿಸಲಿದ್ದಾರೆ. ಇದೇ ವೇಳೆ ರಾಜ್ಯಪಾಲರು, ವಿಜೇತರಿಗೆ ಬಹುಮಾನ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ನಾಯಕ್ ತಿಳಿಸಿದರು.
ಸೇನೆಯಿಂದ ಬೈಕ್ ಸಾಹಸ ಪ್ರದರ್ಶನ
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಬೆಂಗಳೂರು ದಕ್ಷಿಣ ವಲಯದ ಸೇನೆಯ ಎ.ಎಸ್.ಸಿ ಸೆಂಟರ್ನ 28 ಮಂದಿ ಯೋಧರು ಟಾರ್ನೆಡೋಸ್ ಬೈಕ್ ಸಾಹಸ ಪ್ರದರ್ಶನ ನೀಡಲಿದ್ದಾರೆ. ಜೋಗಿಲ ಸಿದ್ದರಾಜು ಮತ್ತು ತಂಡ ನಾಡಗೀತೆ ಮತ್ತು ರೈತಗೀತೆ ನಡೆಸಿಕೊಡಲಿದೆ. ಕಗ್ಗಲೀಪುರ ಸರ್ಕಾರಿ ಶಾಲೆಯ 650 ಮಕ್ಕಳು ವಿವಿಧತೆಯಲ್ಲಿ ಏಕತೆ ಎಂಬ ಸಾಂಸ್ಕøತಿಕ ಕಾರ್ಯಕ್ರಮ, ಅಬ್ಬಿಗೆರೆಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ 650 ಮಕ್ಕಳು ಪುಣ್ಯವಂತರು ನಾವು ಭಾರತೀಯರು ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಯಶವಂತಪುರದ ರಾಜರಾಜೇಶ್ವರಿ ಆಂಗ್ಲ ಶಾಲೆಯ 600 ಮಕ್ಕಳು ಜೈ ಜವಾನ್, ಜೈ ಕಿಸಾನ್, ಕದಿಗೇನಹಳ್ಳಿಯ ಶ್ರೀಶೈಲ ಪ್ರೌಢಶಾಲೆ, ಬನ್ನೇರುಘಟ್ಟದ ನವಭಾರತ ನಿರ್ಮಾಣ ವಿದ್ಯಾಮಂದಿರದ ಕ್ರಾಂತಿಸೂರ್ಯ ಅಂಬೇಡ್ಕರ್ ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಕುಮಾರ್ ನಾಯಕ್ ಮಾಹಿತಿ ನೀಡಿದರು.
11 ಸಾವಿರ ಮಂದಿಗೆ ಆಸನ
ಮಾಣಿಕ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸಲು ಈ ಬಾರಿ 11 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಜಿ2 ಪ್ರವೇಶ ದ್ವಾರದಲ್ಲಿ ಅತಿಗಣ್ಯ ವ್ಯಕ್ತಿಗಳಿಗಾಗಿ 2000 ಆಸನ, ಜಿ1 ಪ್ರವೇಶ ದ್ವಾರದಲ್ಲಿ ಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗೃರು, ರಕ್ಷಣಾ ಇಲಾಖೆಯ ಅಧಿಕಾರಿಗಳು ಮತ್ತು ಪತ್ರಿಕಾ ಪ್ರತಿನಿಧಿಗಳಿಗಾಗಿ 2000 ಆಸನ, ಜಿ3 ಪ್ರವೇಶ ದ್ವಾರದಲ್ಲಿ ಇತರ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್ಎಫ್ ಅಧಿಕಾರಿಗಳಿಗಾಗಿ 3000 ಆಸನ ಹಾಗೂ ಜಿ4 ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗೆ 4000 ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಮಾರ್ ನಾಯಕ್ ತಿಳಿಸಿದರು.
ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದ್ದಲ್ಲಿ ತಕ್ಷಣ ಪ್ರತಿಕ್ರಿಯಸಲು ಅಗತ್ಯವಿರುವಷ್ಟು ಆಂಬುಲೆನ್ಸ್, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿ.ಶಂಕರ್, ಪೊಲೀಸ್ ಆಯುಕ್ತ ಎನ್.ಎನ್. ಮೇಘರಿಕ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ, ಡಿಸಿಪಿ ಸಂದೀಪ್ ಪಾಟೀಲ್ ಮತ್ತಿತರರು ಹಾಜರಿದ್ದರು.