ಹಾರರ್ ಕಥೆ ಹೊಂದಿರುವ ಸಿನಿಮಾ ‘ಡೇಂಜರ್ ಜೋನ್’ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಇತ್ತೀಚೆಗೆ ಬಿಡುಗಡೆಯಾಯಿತು. ಸಿನಿಮಾವನ್ನು ಪೂರ್ಣಗೊಳಿಸಿರುವ ಸಂಭ್ರಮ ಚಿತ್ರತಂಡದ್ದು. ಇದು ಹುಟ್ಟು ಮತ್ತು ಸಾವಿನ ಹಾರರ್ ಸಿನಿಮಾವಂತೆ.
ನಿರ್ಮಾಣ ಸಹಾಯಕ ರಾಮು ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ. ಪ್ರಸಾಧನ ಕಲಾವಿದ ದೇವರಾಜ್ ಕುಮಾರ್ ಚಿತ್ರದ ನಿರ್ದೇಶಕರು. 14 ವರ್ಷಗಳಿಂದ ಅವರು ಪ್ರಸಾಧನ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಬೇರೆ ಬೇರೆ ಚಿತ್ರತಂಡಗಳಲ್ಲಿ ಕೆಲಸ ಮಾಡಿದ್ದ ಈ ಇಬ್ಬರು ‘ಡೇಂಜರ್ ಜೋನ್’ನಲ್ಲಿ ಒಗ್ಗೂಡಿದ್ದಾರೆ.
ಸೀಡಿ ಬಿಡುಗಡೆ ಮಾಡಿದ್ದು ನಟ ದರ್ಶನ್. ತಂತ್ರಜ್ಞರ ಈ ಶ್ರಮವನ್ನು ಮನಸಾರೆ ಹರಸಿದ ಅವರು ಚಿತ್ರತಂಡವನ್ನು ಉತ್ತೇಜಿಸುವ ಮಾತುಗಳನ್ನಾಡಿದರು. ನಿರ್ದೇಶಕ ದೇವರಾಜ್ ಕುಮಾರ್ ಅವರಿಗೆ ದರ್ಶನ್ ಆಗಮನ ಪುಲಕ ಉಂಟುಮಾಡಿದಂತಿತ್ತು. ನಿರ್ಮಾಣ ಸಂದರ್ಭದಲ್ಲಿ ನಿರ್ಮಾಪಕರು ತೋರಿಸಿದ ಪ್ರೀತಿಯನ್ನು ಕೊಂಡಾಡಿದ ಅವರು ‘ಜನ್ಮದಲ್ಲಿ ಇವರನ್ನು ಮರೆಯುವುದಿಲ್ಲ’ ಎಂದರು.
ಮಂಗಳೂರಿನಲ್ಲಿ ರೇಡಿಯೊ ಜಾಕಿ ಆಗಿರುವ ರೂಪ್ ಶೆಟ್ಟಿ ‘ಡೇಂಜರ್ ಜೋನ್’ ಚಿತ್ರದ ನಾಯಕ. ‘ಸಿನಿಮಾ ಅಂದರೆ ಏನೋ ಅಂದುಕೊಂಡಿದ್ದೆ. ಅಭಿನಯದ ಬಗ್ಗೆ ಭಯ–ಆತಂಕ ಇತ್ತು. ಆದರೆ ಡೇಂಜರ್ ಜೋನ್‌ನಲ್ಲಿ ನಟಿಸುವಾಗ ಇಡೀ ಶೂಟಿಂಗ್ ಪ್ರಕ್ರಿಯೆ ಕುಟುಂಬದ ಕೆಲಸ ಎನ್ನುವಂತಿತ್ತು’ ಎಂದು ಚಿತ್ರೀಕರಣ ಅನುಭವಗಳನ್ನು ಅವರು ಮೆಲುಕು ಹಾಕಿದರು.
ರಮ್ಯಾ ‘ಡೇಂಜರ್ ಜೋನ್’ ಚಿತ್ರದ ನಾಯಕಿ. ಉದಯ್ ಖಳನಾಯಕನ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕಾಗಿ 45 ದಿನಗಳ ಕಾಲ ದೇಹ ದಂಡಿಸಿ ಸಿಕ್ಸ್ ಪ್ಯಾಕ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಸೃಜನ್ ಲೋಕೇಶ್ ‘ಈ ಸಿನಿಮಾ ಸಕ್ಸಸ್ ಜೋನ್’ ಆಗಲಿ ಎಂದು ಹಾರೈಸಿದರು.
‘ಡೇಂಜರ್ ಜೋನ್’ ದಡಮುಟ್ಟಲಿ ಎಂದವರ ಪಟ್ಟಿಯಲ್ಲಿ ನಟಿ ರಾಗಿಣಿ ಕೂಡ ಇದ್ದರು. ಮೂರು ಹಾಡುಗಳಿಗೆ ಸತೀಶ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಸ್ವಾಗತ್ ಗೌಡ ಸಹ ನಿರ್ಮಾಪಕ. ಒಟ್ಟಾರೆ ಚಿತ್ರದ ಬಜೆಟ್ ಒಂದೂವರೆ ಕೋಟಿ ರೂಪಾಯಿ.