ಮೈಸೂರು: ಯಾರೇ ಆಗಲಿ ಟೀಕೆ ಮಾಡುವ ಮೊದಲು ನಾಲಗೆಯನ್ನು ಬಿಗಿ ಹಿಡಿದು ಮಾತನಾಡುವುದು ಒಳಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ಇಂದು ಬೆಳಗ್ಗೆ ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಕಿಡಿಕಾರಿದರು. ಬಿಜೆಪಿ ಮುಖಂಡ ಸುಬ್ರಮಣ್ಯಸ್ವಾಮಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ವಿರುದ್ಧ ಏಕವಚನ ಪದಪ್ರಯೋಗ ಮಾಡಿರುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಭಾಷೆ ಬಳಸುವ ಮುನ್ನ ಯೋಚಿಸುವುದು ಅಗತ್ಯ. ಯಾರೇ ಆಗಲಿ ಟೀಕಿಸುವ ಮೊದಲು ನಾಲಿಗೆಯ ಮೇಲೆ ಬಿಗಿ ಹಿಡಿತವಿರುವುದು ಒಳ್ಳೆಯದು. ಟೀಕೆಗಳು ಸಕಾರಾತ್ಮಕವಾಗಿರಬೇಕು ಎಂದು ಅವರು ಕಿಡಿಕಾರಿದರು.
ಉಗ್ರ ನಿಗ್ರಹಕ್ಕೆ ಕ್ರಮ
ಇದೇ ವೇಳೆ ಕಳೆದ ವಾರ ಕರ್ನಾಟಕದಲ್ಲಿ ಬಂಧಿತರಾದ ಶಂಕಿತ ಉಗ್ರರ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಉಗ್ರ ನಿಗ್ರಹಕ್ಕೆ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ. ರಾಜ್ಯದ ಪೋಲಿಸರು ಕೇಂದ್ರದ ಎನ್ ಐಎ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಗಣರಾಜ್ಯೋತ್ಸವ ದಿನದಂದು ದೆಹಲಿ, ಬೆಂಗಳೂರು, ಮುಂಬೈ, ಪಕ್ಷಿಮಬಂಗಾಳ ಸೇರಿದಂತೆ ಅನೇಕ ಕಡೆ ವಿದ್ವಾಂಸಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ 5 ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸರು ಕಟ್ಟೆಚ್ಚರವಹಿಸಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ರಾಜ್ಯದ ಪೋಲಿಸರು ಬದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಉಪ ಚುನಾವಣೆ; ನಾಳೆ ಪಟ್ಟಿ ಪ್ರಕಟ
ದೇವದುರ್ಗ, ಬೀದರ್, ಹೆಬ್ಬಾಳ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಬಿಡುಗಡೆಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಈ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ವರಿಷ್ಟರ ಒಪ್ಪಿಗೆಯ ನಂತರ ನಾಳೆ ಅಧಿಕೃತವಾಗಿ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕರ್ನಾಟಕ