ನವದೆಹಲಿ : ಜನವರಿ 26 ರ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಯಾಂಡ್ ಅವರು ಫ್ರಾನ್ಸ್‌ನ ನಿಯೋಗದೊಂದಿಗೆ ಭಾನುವಾರ ಸಂಜೆ ಚಂಧೀಘಡಕ್ಕೆ ಆಗಮಿಸಿದ್ದಾರೆ.
3 ದಿನಗಳ ಭಾರತ ಪ್ರವಾಸಕ್ಕಾಗಿ ಚಂಧೀಘಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಹೊಲ್ಯಾಂಡ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಗವರ್ನರ್ ಕಪ್ತಾನ್ ಸಿಂಗ್ ಸೋಲಂಕಿ ಅವರು ಸ್ವಾಗತಿಸಿದರು.
ಬಳಿಕ ರಾಕ್ ಗಾರ್ಡನ್‌ಗೆ ಆಗಮಿಸಿದ ಹೊಲ್ಯಾಂಡ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ರಫೆಲ್ ಜೆಟ್ ಒಪ್ಪಂದ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ:ಹೊಲ್ಯಾಂಡ್
ಭಾರತ ಭೇಟಿಗೂ ಮುನ್ನ ಪ್ಯಾರೀಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊಲ್ಯಾಂಡ್ ‘ಭಾರತದೊಂದಿಗೆ ಮಾಡಿಕೊಂಡಿರುವ ಬಹು ಬಿಲಿಯನ್ ಡಾಲರ್ ರಫೆಲ್ ಜೆಟ್ ಒಪ್ಪಂದ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು ತಂತ್ರಜ್ಞಾನಗಳಿಗೆ ಒಗ್ಗಿಕೊಳ್ಳಲು ಕೆಲ ಸಮಯ ತಗಲುತ್ತದೆ’ ಎಂದರು.
ಮೋದಿ ಅವರನ್ನು ಹಾಡಿ ಹೊಗಳಿದ ಹೊಲ್ಯಾಂಡ್ ‘ರಾಜತಂತ್ರದಲ್ಲಿ ಬಲವಾದ ಸಂಕಲ್ಪ ಹೊಂದಿರುವ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ’ ಎಂದರು.
-ಉದಯವಾಣಿ