ಬೆಂಗಳೂರು: ಬೆಂಗಳೂರು ಹಾಗೂ ತುಮಕೂರು, ಮಂಗಳೂರಲ್ಲಿ ಬಂಧಿಸಲ್ಪಟ್ಟಿದ್ದ ಆರು ಮಂದಿ ಶಂಕಿತ ಉಗ್ರರನ್ನು ಬೆಂಗಳೂರಿನ ಕೋರ್ಟ್ ದೆಹಲಿ ಎನ್ ಐಎ( ರಾಷ್ಟ್ರೀಯ ತನಿಖಾ ದಳ)ಗೆ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಇಂದು ಬೆಳಗ್ಗೆ ಆರು ಮಂದಿ ಶಂಕಿತ ಉಗ್ರರ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಎನ್ ಐಎ ಅಧಿಕಾರಿಗಳು ನಗರದ ನೃಪತುಂಗ ರಸ್ತೆಯಲ್ಲಿರುವ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿನ ಎನ್ ಐಎ ಕೋರ್ಟ್ ಗೆ ಹಾಜರುಪಡಿಸಿತ್ತು.
ಶಂಕಿತ ಉಗ್ರರ ಪ್ರಕರಣದಲ್ಲಿ, ಬಂಧಿತರನ್ನು ಹೆಚ್ಚಿನ ತನಿಖೆಗೆ ಗುರಿಪಡಿಸುವುದರಿಂದ ತಮ್ಮ ವಶಕ್ಕೆ ನೀಡಬೇಕೆಂದು ಎನ್ ಐಎ ಪರ ವಕೀಲರು ವಾದ ಮಂಡಿಸಿದ್ದರು. ಬಳಿಕ ಆರು ಮಂದಿ ಶಂಕಿತ ಉಗ್ರರನ್ನು ದೆಹಲಿ ಎನ್ ಐಎ ವಶಕ್ಕೆ ಒಪ್ಪಿಸಿತು.
ಗಣರಾಜ್ಯೋತ್ಸವ ಹೊಸ್ತಿಲಲ್ಲೇ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಐಸಿಸ್ ಸಂಘಟನೆಯ ಸಂಚನ್ನು ಎನ್ ಐಎ ಶುಕ್ರವಾರ ಬಯಲುಗೊಳಿಸಿತ್ತು. ಬೆಂಗಳೂರಲ್ಲಿ ಸೆರೆಸಿಕ್ಕಿದ್ದ ಸಾರೆಪಾಳ್ಯದ ಟೆಕ್ಕಿ ಮೊಹಮ್ಮದ್ ಅಫ್ಜಲ್, ಬ್ಯಾಟರಾಯನಪುರದ ಅಸೀಫ್ ಅಲಿ, ಕಾಟನ್ ಪೇಟೆಯ ಮೊಹಮ್ಮದ್ ಸೊಹೈಲ್ , ಅಹಾದ್ ಹಾಗೂ ಮಂಗಳೂರಿನ ನಜ್ಮುಲ್ ಹುದಾ, ತುಮಕೂರಿನ ಸೈಯದ್ ಹುಸೇನ್ ಸೇರಿ 6 ಮಂದಿಯನ್ನು ಜ.27ರವರೆಗೆ ಎನ್ ಐಎ ವಶಕ್ಕೆ ಒಪ್ಪಿಸಿದೆ.
-ಉದಯವಾಣಿ