ಬೆಂಗಳೂರು,ಜ.೨೩- ರಾಷ್ಟ್ರವ್ಯಾಪಿ ವಿಧ್ವಂಸಕ ಕೃತ್ಯ ಎಸಗುವ ಸಂಚು ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಯ ಬಂಧಿತ ಆರು ಮಂದಿ ಶಂಕಿತ ಐಸಿಸ್ ಉಗ್ರರು ವಿಚಾರಣೆಯ ವೇಳೆ ಸಂಭವನೀಯ ದಾಳಿಗಳ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ.
ಸ್ಕೈಪ್ ಮೂಲಕ ಸಿರಿಯಾದ ಐಸಿಸ್ ಉಗ್ರರ ಸಂಪರ್ಕ
ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಶಂಕಿತ ಉಗ್ರರ ವಿಚಾರಣೆ
ಬಂಧಿತ ಶಂಕಿತ ಉಗ್ರರು ನ್ಯಾಯಾಲಯಕ್ಕೆ ಹಾಜರು
ಕೋಡ್‌ವರ್ಡ್‌ಗಳು ಲ್ಯಾಪ್ ಟಾಪ್‌ಗಳ ಪರಿಶೀಲನೆ
ಶಂಕಿತರ ಜೊತೆ ಸಂಪರ್ಕ ಹೊಂದಿದ ಹಲವರಿಗೆ ಗಾಳ
ವಿಚಾರಣೆ ವೇಳೆ ಆರು ಮಂದಿ ಶಂಕಿತ ಉಗ್ರರು ಸ್ಕೈಪ್ ಮೂಲಕ ಸಿರಿಯಾದ ಐಸಿಸ್ ಉಗ್ರರ ಸಂಪರ್ಕ ಸಾಧಿಸಿರುವುದು ಐಸಿಸ್ ಯೋಜನೆಗಳು ಹಾಗೂ ತಮ್ಮ ಉಗ್ರ ಚಟುವಟಿಕೆಗಳ ಬಗ್ಗೆ ಒಂದೇ ಫೇಸ್‌ಬುಕ್ ಗ್ರೂಪ್‌ನಲ್ಲಿ ಪ್ರತಿನಿತ್ಯ ಚರ್ಚೆ ನಡೆಸುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ.
ಫೇಸ್‌ಬುಕ್‌ನಲ್ಲಿ ‘ಡಾಕ್ಟರ್ ಮೆಡಿಸನ್ ಲೀಕ್ ಕರೇಗಾ’ ಎಂಬ ಕೋಡ್ ವರ್ಡ್ ಬಳಸುತ್ತಿದ್ದ ಶಂಕಿತ ಉಗ್ರರು ದೇಶದಲ್ಲಿ ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಜ್ಜಾಗುತ್ತಿರುವುದು ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಬಂಧಿತ ಶಂಕಿತ ಉಗ್ರರಾದ ತುಮಕೂರಿನ ಸೈಯದ್ ಹುಸೇನ್, ಬ್ಯಾಟರಾಯನಪುರದ ಅಸೀಫ್ ಆಲಿ, ಸಾರಾಯಿಪಾಳ್ಯದ ಮೊಹಮ್ಮದ್ ಅಫ್ಜಲ್, ಕಾಟನ್‌ಪೇಟೆಯ ಜೆ.ಜೆ.ನಗರದ ಪೆನ್ಷನ್ ಮೊಹಲ್ಲಾದ ಮೊಹಮ್ಮದ್ ಸೊಹೇಲ್ ಹಾಗೂ ಮಂಗಳೂರಿನ ಹುದಾನನ್ನು ಮಧ್ಯರಾತ್ರಿ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರಿಕ್ಷೆ ನಡೆಸಿದ ನಂತರ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿದೆ.
ಶಂಕಿತ ಉಗ್ರರನ್ನು ೨೦ ಅಧಿಕಾರಿಗಳ ತಂಡ ಸತತ ವಿಚಾರಣೆ ನಡೆಸಿ ಅವರ ಬಳಿ ದೊರೆತಿರುವ ಲ್ಯಾಪ್‌ಟಾಪ್‌ಗಳು, ಹಾರ್ಡ್‌ಡಿಸ್ಕ್‌ಗಳು, ಇನ್ನಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳ ಕೋಡ್‌ವರ್ಡ್ ಪಾಸ್‌ವರ್ಡ್‌ಗಳನ್ನು ಪಡೆದು ಮಾಹಿತಿ ಕಲೆ ಹಾಕ ತೊಡಗಿದ್ದಾರೆ. ವಿಚಾರಣೆಯಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದ ನಾಲ್ವರು ಐಸಿಸ್ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವುದು ಪತ್ತೆಯಾಗಿರುವುದರಿಂದ ಅವರನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಶಂಕಿತ ಉಗ್ರರು ಜುಂದ್ ಉಲ್ ಖಲೀಫಾ ಎ ಹಿಂದ್ ಎನ್ನುವ ಸಬ್ ಸ್ಲೀಪರ್ ಸೆಲ್ ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ. ಇನ್ನೂ ಬಂಧಿತರ ತೀವ್ರ ವಿಚಾರಣೆಯ ನಂತರ ಎನ್‌ಐಎ ಹಾಗೂ ಎಟಿಎಸ್ ಪೊಲೀಸರು ಬಂಧಿತರನ್ನು ಇಂದು ಮಧ್ಯಾಹ್ನ ಸಿಟಿ ಸಿವಿಲ್ ಕೋರ್ಟ್ ಆವರಣದ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ್ಯಾಯಾಲಯವು ಉಗ್ರರನ್ನು ಇದೇ ತಿಂಗಳ ೨೭ರವರೆಗೆ ಎನ್‌ಐಎ ವಶಕ್ಕೆ ನೀಡಿದೆ. ಮತ್ತೆ ವಶಕ್ಕೆ ತೆಗೆದುಕೊಂಡ ತನಿಖಾ ತಂಡವು ವಿಚಾರಣೆಗೊಳಪಡಿಸಿದೆ. ಶಂಕಿತ ಉಗ್ರರ ಬಳಿ ಭಯೋತ್ಪಾದಕ ಚಟುವಟಿಕೆಗಳ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮಂಪರು ಪರಿಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ, ಬೆಂಗಳೂರು, ಮಂಗಳೂರು, ತುಮಕೂರು, ಮುಂಬೈ, ಹೈದ್ರಾಬಾದ್, ಉತ್ತರಪ್ರದೇಶದಲ್ಲಿ ಐಸಿಸ್ ಪರ ಕೆಲಸ ಮಾಡುತ್ತಿರುವ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ವಶಕ್ಕೆ ಪಡೆದುಕೊಂಡಿರುವ ಮೊಬೈಲ್, ಲ್ಯಾಪ್ ಟಾಪ್, ಬಾಂಬ್ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತು ಹಾಗೂ ಶಸ್ತ್ರಾಸ್ತ್ರಗಳನ್ನು ತಂತ್ರತ್ಞರ ನೆರವು ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಸ್ಥಳೀಯ ಪೊಲೀಸರು ಉಗ್ರರ ವಿಚಾರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡ ತೊಡಗಿದ್ದಾರೆ.
ಗಣರಾಜ್ಯೋತ್ಸವ ಆಚರಣೆಗೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರಿಗೆ ಆಹ್ವಾನ ಬಳಿಕ ಐಸಿಎಸ್ ಸಂಘಟನೆ, ಭಾರತದ ಮೇಲೆ ಕಂಗೆಣ್ಣು ಬೀರಿದೆ. ಕೆಲ ತಿಂಗಳ ಹಿಂದೆ ಪ್ಯಾರಿಸ್‌ನಲ್ಲಿ ನಡೆಸಿದ ಭಯೋತ್ಪಾದಕ ದಾಳಿ ಮಾದರಿಯಲ್ಲೇ ಭಾರತದ ಪ್ರಮುಖ ನಗರಗಳಲ್ಲಿ ದಾಳಿಗೆ ಐಸಿಸ್ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಪಡೆದ ಕೇಂದ್ರ ಗುಪ್ತಚರ ದಳ, ಈ ಬಗ್ಗೆ ಜಾಗ್ರತೆ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿತು.
ಈ ಮಧ್ಯೆ ಬೆಂಗಳೂರು ಮೌಂಟ್‌ಕಾರ್ಮೆಲ್ ಕಾಲೇಜು ಹತ್ತಿರದಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿಗೆ ಅಲ್‌ಖೈದಾ ಸಂಘಟನೆ ಹೆಸರಿನಲ್ಲಿ ಅನಾಮೇಧಯ ಬೆದರಿಕೆ ಪತ್ರ ಬಂದಿತು. ಗುಪ್ತಚರ ಸೂಚನೆ ಹಿನ್ನೆಲೆಯಲ್ಲಿ ನಗರದಲ್ಲಿ ಮುಂಜಾಗ್ರತೆಯಾಗಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿರುವಾಗ ಎನ್‌ಐಎ, ಕಾರ್ಯಾಚರಣೆ ಆತಂಕಕ್ಕೆ ಕಾರಣವಾಗಿತ್ತು.