ಬೆಂಗಳೂರು,ಜ,14- ನೆನೆಗುದಿಗೆ ಬಿದ್ದಿರುವ ರಾಜ್ಯ ಲೋಕಾಯುಕ್ತಕ್ಕೆ ನ್ಯಾಯಮೂರ್ತಿಗಳ ನೇಮಕದಲ್ಲಿ ವಿನಾಕಾರಣ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು, ಈ ಹುದ್ದೆಗೆ ಇಬ್ಬರು ನ್ಯಾಯಮೂರ್ತಿಗಳನ್ನು ಬಿಟ್ಟರೆ ಬೇರೆ ಯಾರೂ ಇಲ್ಲವೇ ಎಂದು ಇಂದಿಲ್ಲಿ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ವಾದ-ವಿವಾದ ನಡೆಯುತ್ತಿದ್ದು, ಆರೋಪವೂ ಕೇಳಿಬರುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಬೇಕೆಂದೇ ನ್ಯಾಯಾಧೀಶರು ಸಿಗುತ್ತಿಲ್ಲ ಎಂದು ಹೇಳುತ್ತಿದೆ. ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರ ಮೇಲೆ ನಿವೇಶನ ಪಡೆದ ಆರೋಪವಿದೆ. ಮತ್ತೊಬ್ಬ ನ್ಯಾಯಮೂರ್ತಿ ವಿಕ್ರಮ್ ಜಿತ್‌ಸೇನ್ ಸಿದ್ದರಿಲ್ಲ ಎಂಬ ಚರ್ಚೆಯಾಗುತ್ತಿದೆ. ಇವರಿಬ್ಬರನ್ನು ಬಿಟ್ಟರೆ ಬೇರೆ ನ್ಯಾಯಮೂರ್ತಿಗಳು ಸಿಗುತ್ತಿಲ್ಲವೆ. ಬಿಜೆಪಿ ಅವರಿಗೆ ಅವರೇ ಏಕೆ ಬೇಕು? ಎಂಬುದನ್ನು ಸ್ಪಷ್ಟಪಡಿಸಬೇಕು.
ಭಾಷಣ ಮಾಡುವ ರಾಜಕಾರಣಿಗಳ ಬಂಡವಾಳ ಪರೀಕ್ಷೆ ಮಾಡಿದರೆ ಯಾವ-ಯಾವ ರಾಜಕಾರಣಿಗಳು ರಿಯಲ್ ಎಸ್ಟೇಟೆ ಹಿಂದಿದ್ದಾರೆ ಎಂಬುದು ಗೊತ್ತಾಗಲಿದೆ. ಎರಡು ರಾಷ್ಟ್ರೀಯ ಪಕ್ಷಗಳು ದೇಶದಲ್ಲಿ ಪೂರ್ಣವಾಗಿ ಭ್ರಷ್ಟಾಚಾರವನ್ನು ತೊಡೆದುಹಾಕಿವೆ ಎಂದು ವ್ಯಂಗ್ಯವಾಡಿದರು.