ಕರ್ನಾಟಕ

ಬಾಹ್ಯಾಕಾಶ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ಚಿಂತನೆ: ಬೇಗ್

Pinterest LinkedIn Tumblr

Roshanಬೆಂಗಳೂರು, ಡಿ.1: ದೇವನಹಳ್ಳಿ ಸಮೀಪ ಒಂದು ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ವಿಶೇಷ ಆರ್ಥಿಕ ವಲಯದ ವ್ಯಾಪ್ತಿಯಲ್ಲಿ ಬಾಹ್ಯಾಕಾಶ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್.ರೋಷನ್‌ಬೇಗ್ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ‘ಇಂಡಿಯಾ-ಎಂಆರ್‌ಓ ಬಾಹ್ಯಾಕಾಶ ಹಾಗೂ ರಕ್ಷಣಾ ಕ್ಷೇತ್ರದ ನಿರ್ವಹಣೆ, ದುರಸ್ತಿ ಹಾಗೂ ಸಮಗ್ರ ವಹಿವಾಟು ಉದ್ಯಮಿಗಳ ಎರಡು ದಿನಗಳ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ರಾಜ್ಯ ಸರಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದು, ದೇವನಹಳ್ಳಿ ಸಮೀಪ ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಒಂದು ಸಾವಿರ ಎಕರೆ ಪ್ರದೇಶವನ್ನು ಮೀಸಲಿರಿಸಲಾಗಿದೆ. ಅದರಲ್ಲೇ ಬಾಹ್ಯಾಕಾಶ ವಿಶ್ವವಿದ್ಯಾನಿಲಯ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ದೇಶದ ವಾಯುಯಾನ ಕ್ಷೇತ್ರದ ರಾಜಧಾನಿಯ ಗೌರವ ನಮ್ಮ ರಾಜ್ಯಕ್ಕೆ ಸಿಕ್ಕಿದೆ. ದೇಶದಲ್ಲೇ ಪ್ರಥಮ ವಿಮಾನಯಾನ ನೀತಿಯನ್ನು ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆಯೂ ನಮ್ಮ ಪಾಲಿಗಿದೆ. ವಿಮಾನಯಾನ ಕ್ಷೇತ್ರದ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಈ ನೀತಿಯನ್ನು ರೂಪಿಸಲಾಗಿದೆ ಎಂದು ರೋಷನ್‌ಬೇಗ್ ತಿಳಿಸಿದರು.

ಎಚ್‌ಎಎಲ್, ಬಿಇಎಲ್, ಇಸ್ರೋದಂತಹ ಪ್ರಮುಖ ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆಯೂರಿವೆ.

ಕೈಗಾರಿಕೆಗು ಹಾಗೂ ಉದ್ಯಮಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಏಕಗವಾಕ್ಷಿ ಯೋಜನೆ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡುತ್ತಿದ್ದು, ಪ್ರಸ್ತಾವನೆಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಂಡಿದೆ ಎಂದು ರೋಷನ್ ಬೇಗ್ ತಿಳಿಸಿದರು.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಎಂಆರ್‌ಒ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಉತ್ಕೃಷ್ಟ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಗೆ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಬೆಂಗಳೂರು ವಾಯುಯಾನ ಕ್ಷೇತ್ರದ ಸ್ವಾಭಾವಿಕ ಕೇಂದ್ರವಾಗಿದ್ದು, ಈ ಕ್ಷೇತ್ರದ ಉದ್ಯಮ ಬೆಳೆಯಲು ಪೂರಕವಾದ ವಾತಾವರಣವಿದೆ. ಕೇಂದ್ರ ಸರಕಾರವು ಹೊಸ ನಾಗರಿಕ ವಿಮಾನಯಾನ ನೀತಿ ಜಾರಿಗೆ ತರಲು ಮುಂದಾಗಿದೆ. ಇದರಲ್ಲಿ ಎಂಆರ್‌ಒ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡಬೇಕು ಎಂದು ಅವರು ತಿಳಿಸಿದರು. ದೇವನಹಳ್ಳಿ ಬಳಿಯಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2008ರಲ್ಲಿ ಕಾರ್ಯಾರಂಭ ಮಾಡಿತು. ಪ್ರತಿವರ್ಷ ಸರಾಸರಿ 18 ದಶಲಕ್ಷ ಪ್ರಯಾಣಿಕರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಎರಡನೆ ರನ್‌ವೇ ಆರಂಭಿಸಬೇಕಿದ್ದು, ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಏರ್ ಇಂಡಿಯಾ ಸಂಸ್ಥೆಯ ಆಶಿಸ್‌ದಾಸ್ ಗುಪ್ತಾ, ಏರೋಸ್ಪೇಸ್ ಉದ್ಯಮಿಗಳಾದ ಭರತ್ ಮಲ್ಕಾನಿ, ಡಾ.ಮಿಲಿನ್, ಎಚ್‌ಎಎಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಂಗನಾಥನ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment