ಅಂತರಾಷ್ಟ್ರೀಯ

ವೈಫೈಗೆ ಗುಡ್‌ಬೈ, ಬರುತ್ತಿದೆ ಲೈಫೈ

Pinterest LinkedIn Tumblr

li-fi

ವೈಫೈ ಬದಲು ಬೆಳಕಿನ ಸಹಾಯದಿಂದ ಡಾಟಾ ವರ್ಗಾವಣೆ ಮಾಡಲು ಸಾಧ್ಯವಾಗುವಂತೆ ಮಾಡುವ ಲೈಫೈ ಕನೆಕ್ಷನ್ ಬರುತ್ತಿದೆ. ಈಗಾಗಲೇ ಲೈಫೈ ಬಗ್ಗೆ ಪ್ರಯೋಗಿಕ ಪರೀಕ್ಷೆಗಳು ನಡೆದು ಬಂದಿವೆ.

ವೈಫೈ ಸಂಪರ್ಕಕ್ಕೆ ಹೋಲಿಸಿದರೆ ಅದಕ್ಕಿಂತ 100 ಪಟ್ಟು ವೇಗದಲ್ಲಿ ಡಾಟಾ ವರ್ಗಾವಣೆ ಲೈಫೈ ಮೂಲಕ ಸಾಧ್ಯವಾಗಲಿದೆ. ಒಂದು ಸೆಕೆಂಡ್‌ನಲ್ಲಿ 1 ಗಿಗಾಬಿಟ್ (1Gbps)ವೇಗದಲ್ಲಿ ಡಾಟಾ ವರ್ಗಾವಣೆ ಮಾಡಲು ಲೈಫೈಯಿಂದ ಸಾಧ್ಯ!

ಲೈಫೈ ಸಂಪರ್ಕಕ್ಕೆ ಸಾಮಾನ್ಯ ಎಲ್‌ಇಡಿ ಬಲ್ಬ್‌ನಂತಿರುವ ಪ್ರಕಾಶದ ಮೂಲ (Source)ನಿಂದ ಒಂದು ಇಂಟರ್‌ನೆಟ್ ಕನೆಕ್ಷನ್  ಮತ್ತು ಒಂದು ಫೋಟೋ ಡಿಟೆಕ್ಟರ್- ಇವಿಷ್ಟೇ ಪರಿಕರಗಳು ಸಾಕು.

ಎಸ್ತೋನಿಯನ್ ರಾಜಧಾನಿ ಟಾಲಿನ್ ನಲ್ಲಿ  ವೆಲ್ ಮಿನಿ ಎಂಬ ಕಂಪನಿ ಲೈಫೈಯನ್ನು ತಮ್ಮ ಕಂಪನಿಯಲ್ಲಿ ಅಳವಡಿಸಿ ಪ್ರಯೋಗ ನಡೆಸಿದೆ.  ವಿಸಿಬಲ್ ಲೈಟ್ ಕಮ್ಯೂನಿಕೇಷನ್  (VLC) ಮೂಲಕ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸಂಭವಿಸಲಿದೆ ಎಂದು  ವೆಲ್‌ಮಿನಿ ಹೇಳಿದೆ.

ಲೈಫೈ ಎನೇಬಲ್ ಮಾಡಿರುವ ಲೈಟ್ ಬಲ್ಬ್‌ನ ಸಹಾಯದಿಂದ 1 ಜಿಬಿಪಿಎಸ್ ಡಾಟಾ ವರ್ಗಾವಣೆ ಮಾಡುವ ಮೂಲಕ ವೆಲ್‌ಮಿನಿ ಈ ಪ್ರಯೋಗ ಮಾಡಿದೆ. ಇನ್ನು ಮೂರು ನಾಲ್ಕು ವರ್ಷಗಳಲ್ಲಿ ಈ ಸಂಪರ್ಕ ವ್ಯವಸ್ಥೆ ಜನರನ್ನು ತಲುಪಲಿದೆ ಎಂದು ವೆಲ್ ಮಿನಿ ಹೇಳಿದೆ.

2011 ರಲ್ಲಿ ಎಡಿನ್‌ಬರೋ ವಿಶ್ವ ವಿದ್ಯಾನಿಲಯದ ಪ್ರೊ.ಹೆರಾಲ್ಡ್ ಹಾಸ್ ಎಂಬವರು ಟೆಡ್ (TED – Technology, Entertainment and Design) ಒಂದರಲ್ಲಿ ಮಾತನಾಡಿ ಬೆಳಕಿನಿಂದ ಡಾಟಾ ವರ್ಗಾವಣೆ ಮಾಡುವ ಸಂಪರ್ಕದ ಬಗ್ಗೆ ಹೇಳಿದ್ದರು.

ರೇಡಿಯೋ ತರಂಗಗಳ ಬದಲು ಬೆಳಕಿನ ತರಂಗಗಳನ್ನು ಲೈಫೈ ನಲ್ಲಿ ಬಳಸಲಾಗುತ್ತದೆ. ಆದ್ದರಿಂದ ವಿಮಾನದ ಒಳಗೂ ಲೈಫೈ ಬಳಸಬಹುದು ಎಂಬುದು ಇದರ ಪ್ಲಸ್ ಪಾಯಿಂಟ್.

Write A Comment