ರಾಷ್ಟ್ರೀಯ

ನಾವು ಜಾತಿ ಮತ್ತು ಧರ್ಮಗಳನ್ನು ಮೀರಿ ಬೆಳೆಯಬೇಕು: ಮೋದಿ

Pinterest LinkedIn Tumblr

rajysabha-modiನವದೆಹಲಿ: ಸಂವಿಧಾನವೇ ನಮಗೆ ಸ್ಫೂರ್ತಿ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜನ ಜಾತಿ ಮತ್ತು ಧಾರ್ಮಿಕ ವಿಷಯಗಳನ್ನು ಮೀರಿ ಬೆಳೆಯಬೇಕು ಎಂದು ಮಂಗಳವಾರ ಹೇಳಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ಸಂವಿಧಾನದ ಕುರಿತ ಚರ್ಚೆಯ ವೇಳೆ ಮಾತನಾಡಿದ ಮೋದಿ, ನಾವು ಒಗ್ಗಟ್ಟಾಗಿರದಿರಲು ಹಲವು ಕಾರಣಗಳಿವೆ. ಆದರೆ ನಾವು ಒಗ್ಗಟ್ಟಾಗಿರಲು ಕಾರಣಗಳನ್ನು ಹುಡುಕಬೇಕಿದೆ. ಸಮಾಜ ತಾನಾಗಿಯೇ ಸುಧಾರಣೆಗೊಳ್ಳಬೇಕು. ಕೆಲವು ಕೆಟ್ಟ ಆಚರಣೆಗಳಿಂದ ನಾವು ಹೊರಬರಬೇಕಿದೆ ಎಂದರು.

ಮಮತಾಭಾವ ಹಾಗೂ ಸಮತಾಭಾವ ಎರಡೂ ಇದ್ದರಷ್ಟೇ ದೇಶ ಮುನ್ನಡೆಯಲು ಸಾಧ್ಯ. ಸಂವಿಧಾನ ರಚನೆ ವೇಳೆ ಹಲವು ಒತ್ತಡಗಳು ಹಲವೆಡೆಯಿಂದ ಬಂದಿದ್ದವು. ಆದರೂ ಸಹ ನಮಗೆ ಸ್ಪಷ್ಟ ಸಂವಿಧಾನ ಸಿಕ್ಕಿದೆ. ನಮ್ಮ ಸಂವಿಧಾನ ನಮಗೆ ಸ್ಫೂರ್ತಿಯಾಗಬೇಕು. ಸಂವಿಧಾನದ ಸಂದೇಶ ಮುಂದಿನ ಪೀಳಿಗೆಗೆ ತಲುಪಬೇಕು ಎಂದರು.

ಪ್ರತಿಯೊಬ್ಬರು ದೇಶಕ್ಕಾಗಿ ಸಕಾರಾತ್ಮಕ ಸೇವೆ ಸಲ್ಲಿಸಿದ್ದಾರೆ. ನಮ್ಮ ಹಿರಿಯ ನಾಯಕರ ಬಗ್ಗೆ ಯುವ ಪೀಳಿಗೆಗೆ ತಿಳಿಯಲಿ ಅಂತ ಸಂವಿಧಾನ ದಿನಾಚರಣೆ ಮಾಡಲಾಗಿದೆ. ಸಂವಿಧಾನ ನಮಗೆ ದಾರಿದೀಪವಾಗಿದೆ ಎಂದರು.

ಈಗ ಜಗತ್ತು ನಮ್ಮತ್ತ ನೋಡುತ್ತಿದ್ದು, ನಾವು ನಿಭಾಯಿಸಬೇಕಾದ ಕೆಲವು ಜವಾಬ್ದಾರಿಗಳಿವೆ. ನಾವು ಈ ದೇಶದ ಜನರಿಗೆ ಉತ್ತರದಾಯಿಗಳಾಗಿದ್ದೇವೆ. ನೀನು, ನಾನು ಎಂಬುದರಿಂದ ದೇಶದ ಅಭಿವೃದ್ಧಿಯಾಗಲ್ಲ. ಪಕ್ಷ, ಪ್ರತಿಪಕ್ಷ ಹೊರತುಪಡಿಸಿ ದೇಶಕ್ಕಾಗಿ ಶ್ರಮಿಸಬೇಕು ಎಂದು ಪ್ರಧಾನಿ ಹೇಳಿದರು.

Write A Comment