ಹೊಸದಿಲ್ಲಿ, ಡಿ.1: ಇತಿಹಾಸ ಪ್ರಸಿದ್ಧ ಸ್ಮಾರಕ ತಾಜ್ಮಹಲ್ ಹಿಂದೂ ದೇವಾಲಯವಾಗಿತ್ತೆಂಬ ನ್ಯಾಯವಾದಿಗಳ ಗುಂಪೊಂದರ ವಾದವನ್ನು ಭಾರತ ಸರಕಾರವು ಮಂಗಳವಾರ ತಳ್ಳಿಹಾಕಿದೆ. ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಈ ಬಗ್ಗೆ ಮಂಗಳವಾರ ನೀಡಿದ ಹೇಳಿಕೆಯೊಂದರಲ್ಲಿ, ತಾಜ್ಮಹಲ್ ಹಿಂದೂ ದೇಗುಲವಾಗಿತ್ತೆಂಬ ವಾದವನ್ನು ಸಮರ್ಥಿಸುವಂತಹ ಯಾವುದೇ ಸಾಕ್ಷಾಧಾರಗಳು ದೊರೆತಿಲ್ಲವೆಂದು ತಿಳಿಸಿದ್ದಾರೆ.
ತಾಜ್ಮಹಲ್ ಇರುವ ಆಗ್ರಾ ನಗರದ ಆರು ಮಂದಿ ನ್ಯಾಯವಾದಿಗಳು ಕಳೆದ ವರ್ಷ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯೊಂದರಲ್ಲಿ ಈ ಪ್ರಸಿದ್ಧ ಸ್ಮಾರಕವು ಶಿವ ದೇವಾಲಯವಾಗಿತ್ತೆಂಬ ಬಗ್ಗೆ ಬಲವಾದ ಪುರಾವೆಗಳಿವೆ ಎಂದು ವಾದಿಸಿದ್ದರು. ತಾಜ್ಮಹಲನ್ನು ಹಿಂದೂ ದೇವಾಲಯವೆಂದು ಘೋಷಿಸುವಂತೆ ಅವರು ನ್ಯಾಯಾಲಯವನ್ನು ಆಗ್ರಹಿಸಿದ್ದರು.
1653ರಲ್ಲಿ ತನ್ನ ಪ್ರೀತಿಯ ಮಡದಿ ಮಮ್ತಾಜ್ಮಹಲ್ 14ನೆ ಮಗುವಿಗೆ ಜನ್ಮ ನೀಡುವ ವೇಳೆ ಮೃತಪಟ್ಟ ಬಳಿಕ ಶಹಾಜಹಾನ್ ಆಕೆಯ ನೆನಪಿಗಾಗಿ ತಾಜ್ಮಹಲ್ ನಿರ್ಮಿಸಿದ್ದನು. ಬಿಳಿಯಾದ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್ಮಹಲ್ ಭಾರತದ ಮೊಗಲ್ ಕಲಾ ಸಂಸ್ಕೃತಿಯ ಉನ್ನತ ನಿದರ್ಶನವಾಗಿದೆ. 1983ರಲ್ಲಿ ತಾಜ್ಮಹಲನ್ನು ಯುನೆಸ್ಕೊ, ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತ್ತು. ಜಗತ್ತಿನ ಏಳು ಅದ್ಭುತಗಳಲ್ಲೊಂದೆಂದು ಗುರುತಿಸಲ್ಪಟ್ಟಿರುವ ತಾಜ್ಮಹಲ್ಗೆ ಪ್ರತಿದಿನ ಸರಾಸರಿ 12 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ.