ರಾಷ್ಟ್ರೀಯ

‘ಜನಲೋಕಪಾಲ’ಕ್ಕಾಗಿ ತೀವ್ರ ಚಳವಳಿ: ಅಣ್ಣಾ ಹಝಾರೆ ಎಚ್ಚರಿಕೆ

Pinterest LinkedIn Tumblr

Hazare

ರಾಲೆಗಣ್ ಸಿದ್ದಿ,ಡಿ.1: ದಿಲ್ಲಿಯ ಎಎಪಿ ಸರಕಾರವು ವಿಧಾನಸಭೆಯಲ್ಲಿ ಮಂಡಿಸಿರುವ ಜನಲೋಕಪಾಲ ವಿಧೇಯಕ ಜಾರಿಗೆ ಕೇಂದ್ರ ಸರಕಾರವು ಅಡ್ಡಿಪಡಿಸಿದಲ್ಲಿ ತಾನು ಪ್ರತಿಭಟನೆ ಆರಂಭಿಸುವುದಾಗಿ ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯಲ್ಲಿರುವ ತನ್ನ ಊರಾದ ರಾಲೆಗಣ್ ಸಿದ್ದಿಯಲ್ಲಿ ಎಎಪಿ ನಾಯಕರಾದ ಕುಮಾರ್ ವಿಶ್ವಾಸ್ ಹಾಗೂ ಸಂಜಯ್ ಸಿಂಗ್ ತನ್ನನ್ನು ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಎಎಪಿ ನಾಯಕರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ತಾನು, ಕೇಂದ್ರ ಸರಕಾರದ ಕಾರ್ಯಾಲಯಗಳೂ ಇರುವ ದಿಲ್ಲಿಯಲ್ಲಿ ಭ್ರಷ್ಟಾಚಾರ ಕುರಿತ ತನಿಖೆಗೆ ಕೇಂದ್ರವು ಅಡ್ಡಿಪಡಿಸಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದಾಗಿ ಹಝಾರೆ ಹೇಳಿದರು.

ಒಂದು ವೇಳೆ ಹಾಗಾದಲ್ಲಿ, ತಾನು ಎಎಪಿ ಸರಕಾರವನ್ನು ಸಂಪೂರ್ಣವಾಗಿ ಬೆಂಬಲಿಸು ವೆನೆಂದು ಹಝಾರೆ ಭರವಸೆ ನೀಡಿದರು. ಲಂಚದ ಪಿಡುಗಿನ ವಿರುದ್ಧ ಹೋರಾಡಲು ಯಾವುದೇ ರಾಜಿನೀತಿ ಸಲ್ಲದೆಂದು ಹೇಳಿದ ಅವರು, ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಕೇಂದ್ರಕ್ಕೆ ಇಚ್ಛಾಶಕ್ತಿಯ ಕೊರತೆ ಯಿದೆಯೆಂದು ಆಪಾದಿಸಿದರು.

2012ರಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಕೇಜ್ರಿವಾಲ್ ನೇತೃತ್ವದ ಬಣದ ನಿರ್ಧಾರವನ್ನು ವಿರೋಧಿಸಿ, ಹಝಾರೆ ಹಾಗೂ ಇನ್ನು ಕೆಲವು ಭ್ರಷ್ಟಾಚಾರ ವಿರೋಧಿ ಆಂದೋಲನದ ನಾಯಕರು ಬೇರ್ಪಟ್ಟಿದ್ದರು. ಎಎಪಿ ಸರಕಾರದ ಪ್ರಸ್ತಾಪಿತ ಜನಲೋಕಪಾಲ ವಿಧೇಯಕವು, ಹೊಸದಿಲ್ಲಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುವ ಕೇಂದ್ರದ ಉದ್ಯೋಗಿಗಳು ಸಹಿತ ಯಾವುದೇ ಸರಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಪಾಲರಿಗೆ ಅಧಿಕಾರ ನೀಡುತ್ತದೆ.

Write A Comment