ಕರ್ನಾಟಕ

ಕೊಲೆ ಜಾಡು ಬೆನ್ನತ್ತಿದಾಗ ಸಿಕ್ಕಿದ್ದು ಕುಡುಕ!

Pinterest LinkedIn Tumblr

1bloodಮಂಡ್ಯ: ರಕ್ತದ ಕಲೆಗಳನ್ನು ನೋಡಿದ ವ್ಯಕ್ತಿಯೊಬ್ಬರು ಯಾರಧ್ದೋ ಕೊಲೆಯಾಗಿದೆ ಎಂದು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಮಂಡ್ಯ ಪೊಲೀಸರು ಬೇಸ್ತುಬಿದ್ದ ಘಟನೆ ನಡೆದಿದೆ.

ನೂರಡಿ ರಸ್ತೆಯ ವೃತ್ತದಲ್ಲಿರುವ ಏರ್‌ಟೆಲ್‌ ಸ್ಟೋರ್‌ನ ಮಾಲೀಕ ಸೋಮವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆಯಲು ಬಂದಾಗ, ಕೆಳಮಹಡಿಯಲ್ಲಿ ಭಾರೀ ಪ್ರಮಾಣದಲ್ಲಿ ಮನುಷ್ಯನ ರಕ್ತದ ಕಲೆಗಳು ಕಂಡು ಬಂದಿವೆ. ಕೂಡಲೇ ಅವರು ಪೊಲೀಸರಿಗೆ ಪೋನ್‌ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯಾವುದೋ ವ್ಯಕ್ತಿಯ ಕೊಲೆಯಾಗಿದೆ ಎಂದು ಅನುಮಾನಗೊಂಡು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಆರಂಭಿಸಿದರು.

ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದರು. ವಿಷಯ ತಿಳಿದು ಜನ ತಂಡೋಪತಂಡವಾಗಿ ಆಗಮಿಸಲಾರಂಭಿಸಿದರು. ರಕ್ತದ ಕಲೆಗಳ ಜಾಡು ಹಿಡಿದು ತೆರಳಿದ ಶ್ವಾನಗಳು ಗಾಂಧಿನಗರದ 9ನೇ ಕ್ರಾಸ್‌ನಲ್ಲಿದ್ದ ಮನೆಯೊಂದನ್ನು ಹೊಕ್ಕಿ, ಮಂಚದ ಮೇಲೆ ಮಲಗಿದ್ದ ವ್ಯಕ್ತಿಯ ಬಳಿ ನಿಂತವು. ಅಲ್ಲಿ ನೋಡಿದರೆ ಕುಡುಕನೊಬ್ಬ ಮನೆಯ ಮಂಚದ ಮೇಲೆ ಆರಾಮಾಗಿ ಮಲಗಿ, ನಿದ್ರಿಸುತ್ತಿದ್ದ. ಟೋಪಿ ಹಾಕಿದ್ದ ಆತನ ತಲೆಯ ಕೂದಲುಗಳು ರಕ್ತದಿಂದ ತೊಯ್ದಿದ್ದವು. ಮಾಹಿತಿ ಕಲೆದ ಹಾಕಿದ ಬಳಿಕ, ಇದು ಕೊಲೆ ಪ್ರಕರಣವಲ್ಲ ಎಂಬುದು ಗೊತ್ತಾಯಿತು.

ಕುಡುಕನ ಅವಾಂತರ:
ಗಾಂಧೀನಗರ ನಿವಾಸಿ ಶಿವಕುಮಾರ್‌ ಅಲಿಯಾಸ್‌ ಭೋಜ (30) ಎಂಬಾತ ಭಾನುವಾರ ರಾತ್ರಿ ನೂರಡಿ ರಸ್ತೆಯಲ್ಲಿರುವ ಬಾರೊಂದಕ್ಕೆ ತೆರಳಿ, ಕಂಠ ಪೂರ್ತಿ ಕುಡಿದಿದ್ದಾನೆ. ರಾತ್ರಿ 10.30ರ ವೇಳೆ ಬಾರ್‌ನಿಂದ ಹೊರ ಬಂದು, ತೂರಾಡುತ್ತಾ ನೂರಡಿ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದಾನೆ. ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದ ವೇಳೆ ಏರ್‌ಟೆಲ್‌ ಸ್ಟೋರ್‌ ಇರುವ ಕಟ್ಟಡದ ಎದುರುಗಡೆ ಆಯತಪ್ಪಿ ರಸ್ತೆಯಿಂದ ಕೆಳಗಿನ ಮಹಡಿಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಆತನ ತಲೆ ಗೋಡೆಯ ಅಂಚಿಗೆ ಬಡಿದು, ತೀವ್ರ ರಕ್ತಸ್ರಾವ ಉಂಟಾಗಿದೆ.
ಆತನಿಗೆ ಪ್ರಜ್ಞೆ ತಪ್ಪಿದೆ. ಕೆಲ ಸಮಯದ ನಂತರ ರಕ್ತಸ್ರಾವ ತಂತಾನೆ ನಿಂತಿದೆ. ಆತನಿಗೆ ಮುಂಜಾನೆ 5.30ರ ವೇಳೆ ಆತನಿಗೆ ಎಚ್ಚರವಾಗಿದೆ. ನೋವಿನಲ್ಲೂ ಆತ ಮನೆಗೆ ಬಂದಿದ್ದಾನೆ. ಮನೆಯವರಿಗೆ ಗೊತ್ತಾಗಬಾರದು ಎಂದು ಟೋಪಿಯಿಂದ ತಲೆ ಮುಚ್ಚಿಕೊಂಡು, ಹೊದ್ದು ಮಲಗಿದ್ದಾನೆ. ಪೊಲೀಸರು ಶ್ವಾನದಳದೊಂದಿಗೆ ಮನೆಗೆ ಬಂದಾಗಲೇ ಮನೆಯವರಿಗೆ ವಿಷಯ ತಿಳಿದಿದೆ. ಬಳಿಕ ಪೊಲೀಸರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
-ಉದಯವಾಣಿ

Write A Comment