ಕರ್ನಾಟಕ

ಕುವೆಂಪುರಿಗೆ ನೀಡಲಾಗಿದ್ದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪದಕಗಳನ್ನು ಕದ್ದೊಯ್ದಿದ ಕಳ್ಳರು

Pinterest LinkedIn Tumblr

kuvempu home

ಕುಪ್ಪಳ್ಳಿ (ಶಿವಮೊಗ್ಗ), ನ.24: ಕನ್ನಡಿಗರ ಹೆಮ್ಮೆ, ಕಾವ್ಯರ್ಷಿ ಕುವೆಂಪು ಅವರ ಮನೆ `ಕವಿಶೈಲ’ಕ್ಕೆ ನಿನ್ನೆ ರಾತ್ರಿ ನುಗ್ಗಿರುವ ಕಳ್ಳರು ಅವರಿಗೆ ನೀಡಲಾಗಿದ್ದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪದಕಗಳನ್ನು ಕದ್ದೊಯ್ದಿದ್ದಾರೆ.

ನಿನ್ನೆ ರಾತ್ರಿ ಸುಮಾರು 9 ಗಂಟೆ ಆಸುಪಾಸಿಗೆ ಪ್ರಕೃತಿಯ ಮಡಿಲಲ್ಲಿ ಪ್ರಶಾಂತ ವಾತಾವರಣದಲ್ಲಿ ನೆಲೆಸಿರುವ ಕುಪ್ಪಳ್ಳಿಯ ಕವಿಶೈಲದ ರಾತ್ರಿಪಾಳಿಯ ಕಾವಲುಗಾರ ಬರುವ ಕೆಲವೇ ನಿಮಿಷಗಳ ಮುನ್ನ ಈ ದುಷ್ಕೃತ್ಯ ನಡೆದಿದೆ.

ಕದ್ದಿದ್ದು ಎರಡು ಪದಕ

ಮನುಜಮತ, ವಿಶ್ವಪಥದ ತತ್ವವನ್ನು ಸಾರಿಸಾರಿ ಹೇಳಿದ ಈ ಮಹಾಕವಿಯ ಮನೆಗೆ ನುಗ್ಗಿ ಕೇವಲ ಎರಡು ಪದಕಗಳನ್ನು ಕದ್ದೊಯ್ದಿದ್ದಾರೆಂದರೆ ಕಳ್ಳರ ಉದ್ದೇಶವೇನು ಎಂಬ ಕುತೂಹಲ ಕೆರಳೀತು.

ಇದಕ್ಕೆ ಇಂಬು ನೀಡುವಂತೆ ಕವಿಶೈಲದಲ್ಲಿ ಕುವೆಂಪು ಅವರ ರಚನೆಯ ಹಲವಾರು ಪುಸ್ತಕಗಳಿದ್ದ ಗಾಜಿನ ಬೀರುಗಳನ್ನು ಒ‌ಡೆದು ಹಾಕಲಾಗಿದೆ, ಬೀಗಗಳನ್ನು ಮುರಿಯಲಾಗಿದೆ, ಪುಸ್ತಕಗಳನ್ನು ಕಿತ್ತೆಸೆಯಲಾಗಿದೆ.

ಕರ್ನಾಟಕ ರತ್ನ ಸುರಕ್ಷಿತ

ಅಚ್ಚರಿಯ ವಿಷಯವೆಂದರೆ ಅವರಿಗೆ ನೀಡಲಾಗಿದ್ದ `ಕರ್ನಾಟಕ ರತ್ನ’ ಪ್ರಶಸ್ತಿಯಿದ್ದ ಬೀರು ಒಡೆಯಲಾಗಿದೆ. ಆದರೆ, ಪ್ರಶಸ್ತಿ ಫಲಕ ಅಲ್ಲಿಯೇ ಇದೆ. ವಿದೇಶದಲ್ಲಿ ನೀಡಲಾಗಿದ್ದ ಪದಕವೊಂದನ್ನು ಅಲ್ಲೇ ನೆಲದ ಮೇಲೆಸೆದು ಹೋಗಿದ್ದಾರೆ.

`ಅಲ್ಲಿ ಕಳವು ಮಾಡಿ ಲಾಭಗಳಿಸುವಂಥಾದ್ದೇನೂ ಇರಲಿಲ್ಲ. ಯಾರು ಯಾಕೆ ಹೀಗೆ ಮಾಡಿದರೆಂಬುದು ಗೊತ್ತಾಗುತ್ತಿಲ್ಲ, ನಿನ್ನೆ ರಾತ್ರಿ ನಾನು ಬೆಂಗಳೂರಲ್ಲಿದ್ದಾಗ ರಾತ್ರಿ ಸುಮಾರು ಹತ್ತು ಗಂಟೆಗೆ ವಿಷಯ ತಿಳಿಯಿತು. ಹಿಂದಿರುಗುವ ಹಾದಿಯಲ್ಲಿದ್ದೇನೆ’ ಎಂದು ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ನೋವಿನಿಂದ ತಿಳಿಸಿದರು.

ಸಿಸಿಟಿವಿಗಳು ನಾಶ

ಕವಿಶೈಲದ ಮೂಲೆ ಮೂಲೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ಅದನ್ನೆಲ್ಲ ದುಷ್ಕರ್ಮಿಗಳು ಕಿತ್ತೆಸೆದಿದ್ದಾರೆ. ಅಲ್ಲೇ ಇದ್ದ (ಟಿವಿ) ಮಾನಿಟರ್‌ನ್ನು ಒಡೆದು ಹಾಕಿದ್ದಾರೆ.

ಎಲ್ಲಾ ಜಾತಿ – ಧರ್ಮಗಳಿಂದ ದೂರ ಉಳಿದು `ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದು ಕೇಳಿದ ಪ್ರಾಂಜಲ ಹೃದಯದ ಕವಿಯ ಮನೆಯಲ್ಲಿ ಇಂತಹುದೊಂದು ಅಕೃತ್ಯ ನಡೆದಿರುವುದು ಕನ್ನ‌ಡ ಸಾಹಿತ್ಯ ಲೋಕ ಮಾತ್ರವಲ್ಲ ಇ‌ಡೀ ಕರ್ನಾಟಕದ ಕನ್ನಡಾಭಿಮಾನಿಗಳಿಗೆ ಅದರಲ್ಲೂ ಮುಖ್ಯವಾಗಿ ಲೆಕ್ಕವಿಲ್ಲದಷ್ಟು ಕುವೆಂಪು ಅಭಿಮಾನಿಗಳಿಗೆ ಸಹಿಸಲಾಗದ ನೋವು ತಂದಿದೆ.

ಹುನ್ನಾರ ಪತ್ತೆಗೆ ಕ್ರಮ

ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಇದರ ಜತೆಗೇ ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಶತಾಯಗತಾಯ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಶಿಕ್ಷಿಸುವುದು ಮಾತ್ರವಲ್ಲದೆ, ಈ ಅಕೃತ್ಯದ ಹಿಂದೆ ಇರಬಹುದಾದ ಹುನ್ನಾರವನ್ನು ಪತ್ತೆ ಮಾಡಿ ಇಂತಹ ಘಟನೆಗಳು ಇನ್ನು ಮುಂದೆ ನಡೆಯದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ.

Write A Comment