ರಾಷ್ಟ್ರೀಯ

ಇದೆಂಥ ಲೋಕವಯ್ಯಾ…ಆನ್ ಲೈನ್ ನಲ್ಲಿ ಅತ್ತೆಯನ್ನೇ ಮಾರಾಟಕ್ಕಿಟ್ಟ ಸೊಸೆ

Pinterest LinkedIn Tumblr

2nline-businessಹೊಸದಿಲ್ಲಿ : ಮನೆಯ ನಾಲ್ಕು ಗೋಡೆಗಳ ನಡುವೆ ಸೊಸೆಯೊಂದಿಗಿನ ತನ್ನ ಜಟಾಪಟಿ ಮುಂದೊಂದು ದಿನ ಸಾಮಾಜಿಕ ಜಾಲ ತಾಣದಲ್ಲಿ ಹರಾಜಾದೀತು ಎಂಬ ಕಲ್ಪನೆಯೇ ಇರದಿದ್ದ ಆ ಅತ್ತೆ ಅಂಥದ್ದೊಂದು ವಿದ್ಯಮಾನದಿಂದ ಹೈರಾಣಾಗಿ ಹೋಗಿರುವ ಅಪರೂಪದ ಘಟನೆ ಇದಾಗಿದೆ!

ವಿನಿಮಯ ವಹಿಹಾಟಿನ ಫಾಯಿದಾ ಡಾಟ್‌ ಕಾಮ್‌ ನಲ್ಲಿ ಸೊಸೆಯೊಬ್ಬಳು ಮನಶ್ಶಾಂತಿಯ ಪುಸ್ತಕವೊಂದರ ಖರೀದಿಗಾಗಿ ಅತ್ತೆಯನ್ನು ವಿನಿಮಯಿಸಿಕೊಳ್ಳುವ ವಹಿವಾಟು ನಡೆಸಲು ಪೋಸ್ಟ್‌ ಮಾಡಿರುವ ಬರಹ ಕುತೂಹಲ ಕೆರಳಿಸುವಂತಿದೆ.

“60ರ ಆಸುಪಾಸಿನಲ್ಲಿರುವ ನನ್ನ ಅತ್ತೆ, ಆಕೆಯ ಧ್ವನಿಯೋ ತುಂಬಾ ಇಂಪು; ಆದರೆ ನೆರೆಹೊರೆಯವರೆಲ್ಲರನ್ನು ಅದು ಸುಲಭದಲ್ಲಿ ಒಮ್ಮೆಲೇ ಕೊಲ್ಲಬಲ್ಲುದು; ಅಡುಗೆಯ ಬಗ್ಗೆ ಆಕೆ ಮಹಾ ವಿಮರ್ಶಕಿ; ನೀವು ಏನೇ ತಿಂಡಿ ತಿನಸು ಮಾಡಿದರೂ ಅದಕ್ಕಿಂತ ಚೆನ್ನಾಗಿ ಮಾಡಬಹುದಾಗಿತ್ತು ಎಂದು ಆಕೆ ಯಾವತ್ತೂ ಹೇಳುತ್ತಿರುತ್ತಾಳೆ, ಹಾಗೆಯೇ ಆಕೆ ಒಬ್ಬ ಮಹಾ ಸಲಹೆಗಾರ್ತಿ ಕೂಡ; ನೀವು ಏನೇ ಮಾಡಿದರೂ ಅದಕ್ಕಿಂತ ಚೆನ್ನಾಗಿ ಮಾಡಬಹುದಾಗಿತ್ತು ಎಂದು ಸದಾ ಹೇಳುವ ಹೆಂಗಸು !

ಫಾಯಿದಾ ಡಾಟ್‌ ಕಾಮ್‌ ಎಂಬ ವಿನಿಮಯ ವ್ಯವಹಾರದ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ಈ ಪೋಸ್ಟಿಂಗ್‌ ಅನ್ನು ಜಾಲತಾಣ ನಿರ್ವಾಹಕರು ಹತ್ತೇ ನಿಮಿಷಗಳ ಒಳಗೆ ತಾಣದಿಂದ ಕಿತ್ತು ಹಾಕಿದರು ಎನ್ನುವುದು ಬೇರೆ ಮಾತು !

ಆದರೆ ಈ ಬಗೆಯಲ್ಲಿ ಅತ್ತೆ, ಮಾವ, ಪತಿ, ನಾದಿನಿಯರನ್ನು ಮಾರಲು, ವಿನಿಮಯಿಸಿಕೊಳ್ಳ ಬಯಸುವವರ ಪೋಸ್ಟಿಂಗ್‌ ಈಚಿನ ದಿನಗಳಲ್ಲಿ ಒಂದೇ ಸಮನೆ ಹೆಚ್ಚುತ್ತಿದೆ. ಇದು ಕೌಟುಂಬಿಕ ಸಂಬಂಧಗಳು ಹದಗೆಡಹುತ್ತಿರುವುದಕ್ಕೆ ಸಾಕ್ಷಿಯಾಗಿವೆ.

ಆದರೆ ಈ ಬಗೆಯ ಪೋಸ್ಟಿಂಗ್‌ ಹಾಕುವುದು ಸೈಬರ್‌ ಕಾನೂನು ಪ್ರಕಾರ ದಂಡನಾರ್ಹವಾಗಿದೆ. ಹಾಗೆ ಪೋಸ್ಟಿಂಗ್‌ ಹಾಕುವವರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದೆ.

ಫಾಯಿದಾ ಡಾಟ್‌ ಕಾಮ್‌ನ ಸಹ ಸಂಸ್ಥಾಪಕ ಹಾಗೂ ವಕ್ತಾರರಾಗಿರುವ ವಿಪುಲ್‌ ಪಾಲಿವಾಲ್‌ ಅವರು ಈ ಬಗ್ಗೆ ಹೇಳುವುದಿಷ್ಟು:

ಇಂದಿನ ದಿನಗಳಲ್ಲಿ ಜನರು ತಮ್ಮ ಮನೆಯೊಳಗೆ ಹದಗೆಡುತ್ತಿರುವ ಸಂಬಂಧಗಳನ್ನು, ಅಶಾಂತಿಯನ್ನು ತಮ್ಮದೇ ಆದ ವಿಕೃತ ರೀತಿಯಲ್ಲಿ ಈ ಬಗೆಯ ಪೋಸ್ಟಿಂಗ್‌ ಮೂಲಕ ಬಹಿರಂಗಪಡಿಸುತ್ತಾರೆ. ಆದರೆ ಅದು ಕಾನೂನು ಪ್ರಕಾರ ದಂಡನಾರ್ಹವಾಗಿದೆ. ಆದುದರಿಂದ ನಾವು ಬಹಳ ಎಚ್ಚರಿಕೆ ವಹಿಸಿ ಈ ಬಗೆಯ ಪೋಸ್ಟಿಂಗ್‌ಗಳನ್ನು ಕೂಡಲೇ ತೆಗೆದು ಹಾಕುತ್ತೇವೆ.

ನಾವಿನ್ನೂ ಆರಂಭಿಕ ಹಂತದಲ್ಲಿರುವುದರಿಂದ ಈ ಕೆಲಸವನ್ನು ನಾವು ಖುದ್ದು ಮಾಡುತ್ತಿದ್ದೇವೆ. ಹಾಗಾಗಿ ಪೋಸ್ಟಿಂಗ್‌ಗಳು ಬಹಿರಂಗವಾದ ಬಳಿಕವೇ ಅಶ್ಲೀಲ, ಅನೈತಿಕ, ಕಾನೂನು ಬಾಹಿರ ಪೋಸ್ಟಿಂಗ್‌ಗಳು ನಮ್ಮ ಗಮನಕ್ಕೆ ಬರುತ್ತವೆ. ಸದ್ಯದಲ್ಲೇ ನಾವು ಇದಕ್ಕೆ ತಾಂತ್ರಿಕ ಸಾಧ್ಯತೆಗಳನ್ನು ಕಂಡುಕೊಳ್ಳುತ್ತೇವೆ. ಆಗ ಎಲ್ಲವೂ ಸ್ವಯಂಚಾಲಿತವಾಗಿ ನಮ್ಮ ಕೆಲಸ ಹಗುರಾಗುತ್ತದೆ. ಅಲ್ಲಿಯ ತನಕ ನಾವು ಯಾವುದೇ ಎಡವಟ್ಟಾಗದಂತೆ ಎಚ್ಚರವಹಿಸಿ ಆಕ್ಷೇಪಾರ್ಹ ಪೋಸ್ಟಿಂಗ್‌ಗಳನ್ನು ಒಡನೆಯೇ ಕಿತ್ತು ಹಾಕಬೇಕಾಗುತ್ತದೆ.

ಕ್ವಿಕರ್‌ ಡಾಟ್‌ ಕಾಮ್‌ನಲ್ಲಿ ಕೂಡ ಗಂಡ, ಹೆಂಡತಿ, ಅತ್ತೆ, ಮಾವ, ಸೊಸೆ, ನಾದಿನಿಯನ್ನು ಮಾರುವ ಇದೇ ಬಗೆಯ ಆಕ್ಷೇಪಾರ್ಹ ಪೋಸ್ಟಿಂಗ್‌ಗಳು ಬರುತ್ತಿದ್ದು ಅವುಗಳನ್ನೂ ಕೂಡ ಒಡನೆಯೇ ಕಿತ್ತು ಹಾಕಲಾಗುತ್ತಿದೆ ಎಂದು ಜಾಲ ತಾಣ ನಿರ್ವಾಹಕರು ಹೇಳುತ್ತಾರೆ.
-ಉದಯವಾಣಿ

Write A Comment