ಕರ್ನಾಟಕ

ಪಾದಚಾರಿ ಮಾರ್ಗ ಅತಿಕ್ರಮಣ: ಬೀದಿ ಬದಿ ವ್ಯಾಪಾರಿಗಳ ತೆರವು

Pinterest LinkedIn Tumblr

streetಬೆಂಗಳೂರು, ನ. 21: ಬಿಬಿಎಂಪಿಯ ಮಾರುಕಟ್ಟೆ ಸ್ಥಾಯಿ ಸಮಿತಿಯು ತೆರವುಗೊಳಿಸುವ ಕಾರ್ಯ ಮತ್ತೆ ಆರಂಭಿಸಿದ್ದು, ಇಲ್ಲಿನ ಜಯನಗರ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಅನಧಿಕೃತ ವ್ಯಾಪಾರಸ್ಥರನ್ನು ಹಾಗೂ ಮಳಿಗೆದಾರರು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವ ವಸ್ತುಗಳನ್ನು ಇಂದು ತೆರವುಗೊಳಿಸಲಾಗಿದೆ.

ಮಾರುಕಟ್ಟೆ ಸ್ಥಾಯಿ ಸಮಿತಿಯ ಉಪ ಆಯುಕ್ತರು, ಅಧಿಕಾರಿ ಹಾಗೂ ಸಿಬ್ಬಂದಿವರ್ಗ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಜಯನಗರ ವಾಣಿಜ್ಯ ಸಂಕೀರ್ಣದ ಪೂರ್ವದ ಮುಖ್ಯದ್ವಾರದ ಎಡ-ಬಲ ಭಾಗದ ಉದ್ದಕ್ಕೂ ಸುಮಾರು 8 ಅಡಿಗಳ ಜಾಗದಲ್ಲಿ ಚೌಕಕಾರವಾಗಿ ಚಪ್ಪಲಿಗಳನ್ನು ನೇತು ಹಾಕಿರುವುದು ಕಂಡುಬಂದ ಮೇರೆಗೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ, ಈ ಹಿಂದೆ ಸಮಿತಿಯು ತಪಾಸಣೆ ನಡೆಸಿದ ಸಂದರ್ಭದಲ್ಲಿ ಚಪಲಿಗಳು, ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಸಂಕೀರ್ಣಕ್ಕೆ ಬಂದು ಹೋಗುವ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಓಡಾಡಲು ಅಡಚಣೆ ಉಂಟಾಗುವಂತೆ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸಬಾರದೆಂದು ಹಾಗೂ ತಮ್ಮ ತಮ್ಮ ಮಳಿಗೆಗಳ ಚೌಕಟ್ಟಿನಲ್ಲಿಯೇ ವ್ಯಾಪಾರ ವಹಿವಾಟು ನಡೆಸಬೇಕೆಂದು ಎಚ್ಚರಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅದೇ ರೀತಿ ಅತಿಕ್ರಮಿಸಿಕೊಂಡಿರುವುದು ಪುನರಾವರ್ತನೆ ಆಗಿರುವುದನ್ನು ಕಂಡು ಸಮಿತಿಯು ವಿಷಾದ ವ್ಯಕ್ತಪಡಿಸಿದ್ದು, ಒತ್ತುವರಿಯಾಗಿರುವ ಎಲ್ಲ ವಸ್ತುಗಳನ್ನು ಸೀಝ್ ಮಾಡುವಂತೆ ಸೀಝಿಂಗ್ ಸಿಬ್ಬಂದಿಗೆ ಕಾರ್ಯಾಚರಣೆ ವೇಳೆ ಸೂಚಿಸಲಾಯಿತು.

ಮಳಿಗೆದಾರರ ಕಿಡಿ: ಸೀಝಿಂಗ್ ಕಾರ್ಯಕ್ಕೆ ಮುಂದಾದ ಸಿಬ್ಬಂದಿಯ ವಿರುದ್ದ ಮಳಿಗೆದಾರರು ಕಿಡಿಕಾರಿದರು. ಅಲ್ಲದೆ, ಈ ಬಗ್ಗೆ ಕೆಲ ಮಳಿಗೆದಾರರು ಮನವಿ ಮಾಡಿಕೊಂಡ ಬಳಿಕ ಇನ್ನೊಂದು ಅವಕಾಶ ನೀಡಲಾಗಿದೆ. ಇನ್ನು ಮುಂದೆ ಇದೇ ರೀತಿ ಪುನರಾವರ್ತನೆ ಆಗಿರುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾರುಕಟ್ಟೆ ಅಧ್ಯಕ್ಷರು ಎಚ್ಚರಿಕೆ ನೀಡಿದರು.

ತರಕಾರಿ ಮಾರುಕಟ್ಟೆಯ ಒಳಭಾಗದಲ್ಲಿ ಮಳಿಗೆದಾರರು ಗ್ರಾಹಕರಿಗೆ ಓಡಾಡಲು ಅನನುಕೂಲವಾಗುವಂತೆ ವಸ್ತುಗಳನ್ನು ನೇತುಹಾಕಿ ಪ್ರದರ್ಶಿಸುತ್ತಿರುವ ಮಳಿಗೆದಾರರಿಗೆ ಎಚ್ಚರಿಕೆ ನೀಡಲಾಗಿತು.

ಬಿಬಿಎಂಪಿಯ ಶ್ರೀ ಕೃಷ್ಣರಾಜೇಂದ್ರ ಮಾರುಕಟ್ಟೆಯ ಆವರಣವನ್ನು ಪರಿಶೀಲಿಸಿದ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿ ಪರಿಶೀಲನೆ ಸಂದರ್ಭದಲ್ಲಿ ಹೆಚ್ಚಿನ ಜನಸ್ತೋಮ ಇದ್ದುದರಿಂದ ಕಟ್ಟಡದ ಹಿತದೃಷ್ಟಿಯಿಂದ ಈ ಸ್ಥಳವು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿರಬೇಕು. ಅನಧಿಕೃತ ವ್ಯಾಪಾರಸ್ಥರಿಗೆ ನಾಳೆಯಿಂದ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಇನ್ನು ಮುಂದೆ ಸೀಝಿಂಗ್ ಸಿಬ್ಬಂದಿಯು ಲಾರಿಯಲ್ಲಿ ಎಲ್ಲ ಮಾರುಕಟ್ಟೆಗಳನ್ನು ಮಾರುಕಟ್ಟೆವಾರು ಪ್ರತಿನಿತ್ಯ ಪರಿಶೀಲಿಸಿ ಅನಧಿಕೃತ ವ್ಯಾಪಾರಸ್ಥರನ್ನು ತೆರವುಗೊಳಿಸುವ ಕಾರ್ಯಾಚರಣೆಯು ದಿನನಿತ್ಯ ನಡೆಯಲಿದೆ. ಈ ಸಂಬಂಧ ಪಾಲಿಕೆಯ ಮಾರುಕಟ್ಟೆಗಳ ಪ್ರದೇಶದ ಸ್ಥಳೀಯ ಪೊಲೀಸರು ಸೀಝಿಂಗ್ ಸಿಬ್ಬಂದಿಯೊಂದಿಗೆ ಅಗತ್ಯ ಸಹಕಾರ ಹಾಗೂ ಸೀಝಿಂಗ್ ಸಂದರ್ಭದಲ್ಲಿ ಅಗತ್ಯ ರಕ್ಷಣೆಯನ್ನು ನೀಡಬೇಕೆಂದು ಮನವಿ ಮಾಡಿದರು.

Write A Comment