ಕರ್ನಾಟಕ

“ನಕಲಿ ರಾಘವಶ್ರೀ’ ಅಶ್ಲೀಲ ಸೀಡಿ ಕೇಸ್‌ ದಿಢೀರ್‌ ವಾಪಸ್‌

Pinterest LinkedIn Tumblr

shree-raghaveshwara-bharathಬೆಂಗಳೂರು: ಸ್ವಾಮೀಜಿ ವೇಷಧಾರಿಯನ್ನು ಬಳಸಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಬಗ್ಗೆ ತಯಾರಿಸಿದ್ದ ಅಶ್ಲೀಲ ಚಿತ್ರದ ನಕಲಿ ಸಿ.ಡಿ. ಮತ್ತು ಲೇಖನ ಹಂಚುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಉತ್ತರ ಕನ್ನಡ ಜಿಲ್ಲೆ ಗೋಕರ್ಣ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸರ್ಕಾರ ದಿಢೀರ್‌ ಹಿಂದಕ್ಕೆ ಪಡೆದಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಪ್ರಬಲ ಸಾಕ್ಷ್ಯಗಳ ಸಮೇತ ರೆಡ್‌ ಹ್ಯಾಂಡೆಡ್‌ ಆಗಿ ಸಿಕ್ಕಿಬಿದ್ದಿದ್ದ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, 14 ಮಂದಿ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣ ಕುರಿತಂತೆ ಕುಮಟಾ ನ್ಯಾಯಾಲಯದಲ್ಲಿ ಈಗ ವಿಚಾರಣೆ ನಡೆಯುತ್ತಿದೆ. ಆದರೆ, ಗೋಕರ್ಣ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆದು ಸರ್ಕಾರ ನ. 4ರಂದು ಆದೇಶ ಹೊರಡಿಸಿದೆ. ಆದರೆ, ಹೀಗೆ ಪ್ರಕರಣವನ್ನು ದಿಢೀರ್‌ ಹಿಂದಕ್ಕೆ ಪಡೆಯಲು ಯಾವುದೇ ಕಾರಣ ನೀಡಿಲ್ಲ.

ಸರ್ಕಾರದ ಈ ನಡೆಯಿಂದಾಗಿ, ಅಂದು ಪ್ರಕರಣದಲ್ಲಿ ಸಾಕ್ಷ್ಯಸಮೇತ ಸಿಕ್ಕಿಬಿದ್ದಿದ್ದ ಆರೋಪಿಗಳು ಇಂದು ನಿರಾಳವಾಗಿದ್ದಾರೆ. ಅಲ್ಲದೇ, ದೋಷಾರೋಪ ಪಟ್ಟಿ ಮತ್ತು ಸರ್ಕಾರಿ ಅಭಿಯೋಜಕರ ನೇಮಕ ರದ್ದು ಮಾಡಲು ನ್ಯಾಯಾಲಯ ನಿರಾಕರಿಸಿದ್ದರೂ ಸರ್ಕಾರ ಮಾತ್ರ ಇಡೀ ಪ್ರಕರಣವನ್ನೇ ಹಿಂತೆಗೆದುಕೊಳ್ಳಲು ಮುಂದಾಗಿರುವುದು ಅನೇಕ ಅನುಮಾನಗಳಿವೆ ಕಾರಣವಾಗಿದೆ ಎಂದು ಮಠದ ಭಕ್ತರು ಆರೋಪಿಸಿದ್ದಾರೆ.

ಸರ್ಕಾರದ ಈ ಕ್ರಮಕ್ಕೆ ಮಠದ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಾಕಷ್ಟು ಆಸಕ್ತಿ ವಹಿಸಿ ಸಿಐಡಿ ತನಿಖೆ ನಡೆಸಿದ್ದಲ್ಲದೆ ನ್ಯಾಯಾಲಯದಲ್ಲಿನ ವಿಚಾರಣೆಗೆ ವಿಶೇಷ ಅಭಿಯೋಜಕರನ್ನು ನೇಮಿಸಿದ್ದ ರಾಜ್ಯ ಸರ್ಕಾರ, ರಾಘವೇಶ್ವರ ಶ್ರೀಗಳ ವಿರುದ್ಧ ಷಡ್ಯಂತ್ರ ನಡೆಸಿ ಅಪಪ್ರಚಾರ ನಡೆಸಿದ ಹಾಗೂ ಸುಳ್ಳು ಕರಪತ್ರ ವಿತರಿಸಿದ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಕಾರಣವೇನು? ಹಾಗಾದರೆ, ಶ್ರೀಗಳ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರನ್ನು ಸರ್ಕಾರ ಈ ಮೂಲಕ ಬೆಂಬಲಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಪ್ರಕರಣವೇನು?: 2010ರಲ್ಲಿ ಗೋಕರ್ಣದ ವೆಂಕಟರಮಣ ದೇವಸ್ಥಾನದ ಮುಂದಿನ ರಥ ಬೀದಿಯಲ್ಲಿ ಕಾಮದಹನ ಪೂರ್ಣಿಮೋತ್ಸವ ನಡೆಯುತ್ತಿತ್ತು. ಈ ವೇಳೆ (2010ರ ಏ.1) ಮಧ್ಯಾಹ್ನ 3 ಗಂಟೆಗೆ ರಾಘವೇಶ್ವರ ಶ್ರೀಗಳ ಬಗ್ಗೆ ತಯಾರಿಸಿದ್ದ ಅಶ್ಲೀಲ ಸಿ.ಡಿ. ಹಾಗೂ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಕರಪತ್ರಗಳನ್ನು ಹಂಚಲಾಗುತ್ತಿತ್ತು. ಈ ಕುರಿತು ದೇವಾಲಯದ ಆಡಳಿತ ಕಾರ್ಯದರ್ಶಿ ಗಣಪತಿ ಕೃಷ್ಣ ಹೆಗಡೆ ಎಂಬುವರು ದೂರು ದಾಖಲಿಸಿದ್ದರು. ಅದರಂತೆ ಶ್ರೀಗಳ ಘನತೆಗೆ ಧಕ್ಕೆ ಮಾಡುವ ಉದ್ದೇಶದಿಂದ ಅಶ್ಲೀಲ ಚಿತ್ರ, ಆಕೃತಿ, ಸಿ.ಡಿ. ತಯಾರಿಸಿದ್ದಲ್ಲದೆ, ಕರಪತ್ರಗಳನ್ನು ಹಂಚುವ ಮೂಲಕ ಒಳಸಂಚು ಮಾಡಿದ್ದಾರೆ. ಇದು ಸಾಮಾಜಿಕ ಸಮಗ್ರತೆಗೆ ಬಾಧಕವಾಗುವ ಕೃತ್ಯವಾಗಿದ್ದು, ಜನರ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ನೋವುಂಟು ಮಾಡಿದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿದ್ದರು. ಅಲ್ಲದೆ, ನಕಲಿ ಸ್ವಾಮೀಜಿ ಬಳಸಿ ತಯಾರಿಸಿದ್ದ ಅಶ್ಲೀಲ ವೀಡಿಯೋ, ಫೋಟೋಗಳಿರುವ ಸಿ.ಡಿ., ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌, ಕಂಪ್ಯೂಟರ್‌ ಹಾರ್ಡ್‌ಡಿಸ್ಕ್ ಮತ್ತಿತರ ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ವ್ಯಕ್ತಿಯೊಬ್ಬನಿಗೆ ಸ್ವಾಮೀಜಿಯ ವೇಷ ಹಾಕಿಸಿ ತೆಗೆದ ಫೋಟೋ, ವೀಡಿಯೋ, ಎಡಿಟ್‌ ಮಾಡಿದ ಅಶ್ಲೀಲ, ಫೋಟೋಗಳೂ ಅದರಲ್ಲಿದ್ದವು. ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಅಂತಿಮವಾಗಿ ತನಿಖೆ ಪೂರ್ಣಗೊಳಿಸಿದ ಪೊಲೀಸರು 14 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಹೆಚ್ಚುವರಿ ದೋಷಾರೋಪ ಪಟ್ಟಿ ಕೂಡ ಸಲ್ಲಿಕೆಯಾಗಿತ್ತು.

ಇನ್ನೊಂದೆಡೆ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಾದ ಮಂಡಿಸಲು ವಿಶೇಷ ಅಭಿಯೋಜಕರನ್ನು ಕೂಡ ಸರ್ಕಾರ ನೇಮಕ ಮಾಡಿತ್ತು. ಅಲ್ಲದೆ, ಪ್ರಾಸಿಕ್ಯೂಷನ್‌ಗೆ ಅನುಮತಿಯನ್ನೂ ನೀಡಿತ್ತು.

ಈ ಮಧ್ಯೆ ದೋಷಾರೋಪ ಪಟ್ಟಿ, ಹೆಚ್ಚುವರಿ ದೋಷಾರೋಪ ಪಟ್ಟಿ ಮತ್ತು ವಿಶೇಷ ಅಭಿಯೋಜಕರನ್ನು ನೇಮಿಸಿದ್ದ ಕ್ರಮ ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ಮತ್ತು ಮೇಲ್ಮನವಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು. ಜತೆಗೆ ವಿಶೇಷ ಅಭಿಯೋಜಕರನ್ನು ನೇಮಿಸಿದ್ದ ಸರ್ಕಾರದ ಕ್ರಮ ಎತ್ತಿಹಿಡಿದು, ಇದೊಂದು ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವಾಗಿದೆ ಎಂದೂ ಅಭಿಪ್ರಾಯಪಟ್ಟಿತ್ತು.

ಇದೆಲ್ಲಾ ಪ್ರಕ್ರಿಯೆಗಳು ಮುಗಿದು ಇದೀಗ ಪ್ರಕರಣ ಕುಮಟಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ, ರಾಜ್ಯ ಸರ್ಕಾರ ನ. 4ರಂದು ಆದೇಶ ಹೊರಡಿಸಿ ಶ್ರೀಗಳ ವಿರುದ್ಧ ಅಪಪ್ರಚಾರ ಮಾಡಿದ ಮತ್ತು ಸುಳ್ಳು ಕರಪತ್ರ ಹಂಚಿದ ಕುರಿತಂತೆ ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನೇ ಹಿಂಪಡೆದಿದೆ. ಈ ಆದೇಶವನ್ನು ಕುಮಟಾ ನ್ಯಾಯಾಲಯಕ್ಕೆ ಸಲ್ಲಿಸಿದರೆ ಅಲ್ಲಿಗೆ ಪ್ರಕರಣ ಮುಕ್ತಾಯವಾದಂತಾಗುತ್ತದೆ.

ರೈತರು, ಕನ್ನಡ ಹೋರಾಟಗಾರಿಗೂ ಇಲ್ಲದ ಭಾಗ್ಯ:
ಸಾಮಾನ್ಯವಾಗಿ ವಿವಿಧ ರೀತಿಯ ಹೋರಾಟ, ಪ್ರತಿಭಟನೆ, ರ್ಯಾಲಿ ಸಂದರ್ಭದಲ್ಲಿ ಆಗುವ ಗಲಭೆ, ಗುಂಪು ಘರ್ಷಣೆ ನಡೆದ ಸಂದರ್ಭದಲ್ಲಿ ಹತ್ತಾರು ಇಲ್ಲವೇ ನೂರಾರು ಮಂದಿಯ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುವುದು ಸಾಮಾನ್ಯ. ಆದರೆ, ಒಬ್ಬ ಮಠಾಧೀಶರ ವಿರುದ್ಧ ಷಡ್ಯಂತ್ರ ನಡೆಸಿ ಅವರ ಘನತೆಗೆ ಧಕ್ಕೆ ತರಲು ಯತ್ನಿಸಿದ ಪ್ರಕರಣವನ್ನು ಸಕಾರಣವಿಲ್ಲದೆ ಮತ್ತು ತೊಂದರೆಗೊಳಗಾದವರಿಗೆ ಯಾವುದೇ ಮಾಹಿತಿ ನೀಡದೆ ಸರ್ಕಾರ ಹಿಂಪಡೆದಿದ್ದೇಕೆ ಎಂದು ಮಠದ ಭಕ್ತರು ಪ್ರಶ್ನಿಸಿದ್ದಾರೆ. ಅಲ್ಲದೆ, ಇದರ ಹಿಂದೆ ಯಾವ ಶಕ್ತಿ ಕೆಲಸ ಮಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಆದೇಶದಲ್ಲಿ ಏನಿದೆ?
ಸರ್ಕಾರಿ ಆದೇಶದಲ್ಲಿ ಯಾವುದೇ ಕಾರಣವನ್ನು ತಿಳಿಸಿಲ್ಲ. 3 ವಾಕ್ಯಗಳ ಆದೇಶವನ್ನು ಸರ್ಕಾರ ಮಾತ್ರ ನೀಡಿದೆ.ಈ ಮೊಕದ್ದಮೆಯನ್ನು ಅಭಿಯೋಜನೆಯಿಂದ ಹಿಂಪಡೆಯುವ ಬೇಡಿಕೆಗಳ ಬಗ್ಗೆ ಸರ್ಕಾರ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ. ಉತ್ತರ ಕನ್ನಡ ಜಿಲ್ಲೆ ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಮೊಕದ್ದಮೆ ಸಂಖ್ಯೆ: 27/2010 ಪ್ರಕರಣವನ್ನು ಸಿಆರ್‌ಪಿಸಿ ಕಲಂ 321 ರೀತ್ಯಾ ಅಭಿಯೋಜನೆಯಿಂದ ಹಿಂಪಡೆಯಲು ಸರ್ಕಾರದ ಮಂಜೂರಾತಿ ನೀಡಲಾಗಿದೆ. ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಇವರು ಈ ಪ್ರಕರಣವನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ಹಿಂಪಡೆಯಲು ಅಗತ್ಯವಾದ ಅರ್ಜಿ ಸಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳುವುದು.
-ಉದಯವಾಣಿ

Write A Comment