ಕರ್ನಾಟಕ

ಆರ್.ನಾಗೇಶ್ ನಾಟಕೋತ್ಸವ ಹಾಗೂ ವಿಚಾರ ಸಂಕಿರಣ; ಕಲೆ ಪ್ರೋತ್ಸಾಹಿಸಿದರೆ ನಾಗರಿಕತೆ ಜೀವಂತ: ದಿನೇಶ್‌ಗುಂಡೂರಾವ್

Pinterest LinkedIn Tumblr

Minister for Food and Civil Supplies Dinesh Gundu Rao addressing a press conference at Vikasa Soudha in Bangalore on Wednesday.- KPN ### Dinesh Gundu Rao PC

ಬೆಂಗಳೂರು, ನ.21: ಯಾವ ನಾಡಲ್ಲಿ ಕಲೆ ಹಾಗೂ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗುತ್ತೋ ಅಲ್ಲಿ ಜನಪರವಾದ ನಾಗರಿಕತೆ ಜೀವಂತವಾಗಿರುತ್ತದೆ ಎಂದು ಆಹಾರ ಮತ್ತು ಸರಬರಾಜು ಸಚಿವ ದಿನೇಶ್‌ಗುಂಡೂರಾವ್ ತಿಳಿಸಿದ್ದಾರೆ.

ಶನಿವಾರ ಪಂಪ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಂಗ ನಿರ್ದೇಶಕ ‘ಆರ್.ನಾಗೇಶ್ ನಾಟಕೋತ್ಸವ ಹಾಗೂ ವಿಚಾರ ಸಂಕಿರಣ’ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಸಮಾಜಕ್ಕೆ ಕಲೆ ಹಾಗೂ ಸಾಹಿತ್ಯದ ಅಗತ್ಯವಿದೆ. ಕಲೆಯನ್ನು ಆರಾಧಿಸುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಜನಪರವಾದ, ಸಾಮಾಜಿಕ ಕಳಕಳಿವುಳ್ಳ ಕಲೆಗಾರಿಕೆ ಮಾಯವಾಗಿದೆ. ಕಲೆಯನ್ನು ಜನಪರಗೊಳಿಸುವತ್ತ ರಂಗತಂಡಗಳು ಆಸಕ್ತಿ ವಹಿಸಬೇಕು. ಆ ಮೂಲಕ ಜನಪರವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವೆಂದು ದಿನೇಶ್‌ಗುಂಡೂರಾವ್ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇವಲ ನಗರಕ್ಕೆ ಸೀಮಿತಗೊಳಿಸಬಾರದು. ಗ್ರಾಮಾಂತರ ಪ್ರದೇಶದಲ್ಲಿ ಸೃಜನಶೀಲತೆಗೆ ಪೂರಕವಾಗುವ ಹಲವು ವಸ್ತುಗಳಿವೆ. ಅದನ್ನು ರಂಗ ತಂಡಗಳು ಸಮರ್ಪಕವಾಗಿ ಬಳಸಿಕೊಂಡು ಜನತೆಗೆ ಉಣಬಡಿಸಬೇಕು. ಗ್ರಾಮಾಂತರ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಬೇಕೆಂದು ಅವರು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಮಾತನಾಡಿ, ಎಪ್ಪತ್ತು, ಎಂಬತ್ತರ ದಶಕದಲ್ಲಿದ್ದ ಹವ್ಯಾಸಿ ರಂಗಭೂಮಿ ಈಗ ಕಾಣದಾಗಿದೆ. ಆ ದಿನಗಳ ಸಾಮಾಜಿಕ, ರಾಜಕೀಯ ವಿಷಯಗಳೆ ರಂಗಭೂಮಿಗೆ ಮುಖ್ಯ ಕಥಾವಸ್ತುವಾಗಿರುತ್ತಿತ್ತು. ಹಾಗಾಗಿ ಮತ್ತೊಮ್ಮೆ ಹವ್ಯಾಸಿ ರಂಗಭೂಮಿ ತನ್ನ ಹೊಳಪನ್ನು ಕಂಡುಕೊಳ್ಳಬೇಕಾಗಿದೆ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಸಮುದಾಯದ ಮಾಜಿ ಅಧ್ಯಕ್ಷ ಸಿ.ಕೆ.ಗುಂಡಣ್ಣ, ಹಿರಿಯ ರಂಗಕರ್ಮಿ ಕೆ.ವಿ.ನಾಗರಾಜುಮೂರ್ತಿ, ಕೈಗಾರಿಕೋದ್ಯಮಿ ಕೆ.ಎಸ್.ತಿಮ್ಮರಾಜು ಮತ್ತಿತರರಿದ್ದರು.

Write A Comment