ಕರ್ನಾಟಕ

ಕೃಷಿ ಮೇಳ-2015; ಆತ್ಮಹತ್ಯೆಗೈದ ರೈತರಿಗೆ ಪರಿಹಾರ ಘೋಷಣೆ ತಪ್ಪು: ಮುನಿಯಪ್ಪ

Pinterest LinkedIn Tumblr

krushi________________ಬೆಂಗಳೂರು, ನ. 21: ರೈತರು ಸರಕಾರ ನೀಡುವ ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಸಂಶಯ ನನಗೆ ಹುಟ್ಟಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಕೆ.ಎಚ್.ಮುನಿಯಪ್ಪಹೇಳಿದ್ದಾರೆ.

ಶನಿವಾರ ನಗರದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಕೃಷಿ ಮೇಳ-2015ರ ಮೂರನೆ ದಿನದ ಅಂಗವಾಗಿ ಏರ್ಪಡಿಸಿದ್ದ, ರೈತರಿಂದ-ರೈತರಿಗಾಗಿ ಚರ್ಚಾಗೋಷ್ಠಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮಹತ್ಯೆಗೆ ಶರಣಾಗುವ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿ ತಪ್ಪುಮಾಡಿದ್ದಾರೆ. ಇದು ಸರಿಯಾದ ಯೋಜನೆಯಲ್ಲ. ಆತ್ಮಹತ್ಯೆಗೆ ಹೆಚ್ಚು ಪರಿಹಾರ ಘೋಷಿಸುವುದು ರೈತರ ಸಾವಿಗೆ ಬೆಂಬಲ ಕೊಟ್ಟಂತೆ ಆಗಲಿದೆ. ಅಲ್ಲದೆ ರೈತರು ಪರಿಹಾರದ ಹಣಕ್ಕಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆಯೇ ಎಂಬ ಸಂಶಯಕ್ಕೂ ಕಾರಣವಾಗಿದೆ ಎಂದು ನುಡಿದರು.

ರಾಜ್ಯದಲ್ಲಿ ಕೆಲವು ಕಡೆ ಮಳೆ ಬಂದ ಕಾರಣ ರೈತರ ಬೆಳೆ ಹಾನಿಯಾಗಿದ್ದು, ಅಪಾರ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ಆತ್ಮಹತ್ಯೆಗೆ ಹೆಚ್ಚು ಪರಿಹಾರ ನೀಡುವ ಮೂಲಕ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ ಎಂಬ ಅಂಶವನ್ನು ಸರಕಾರ ತಿಳಿದುಕೊಳ್ಳಬೇಕು. ಅದೇ ರೀತಿ, ಸಾವಿನಿಂದ ಸಂಸಾರವನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ರೈತರು ಅರಿತುಕೊಳ್ಳಬೇಕೆಂದು ಮುನಿಯಪ್ಪ ಅಭಿಪ್ರಾಯಪಟ್ಟರು.

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದ ಅವರು, ಸರಕಾರಗಳು ರೈತರು ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಡಬೇಕು. ರೈತರ ಪದಾರ್ಥಗಳಿಗೆ ವೈಜ್ಞಾನಿಕ ಬೆಲೆ ಹಾಗೂ ಮಾರುಕಟ್ಟೆ ರೂಪಿಸಬೇಕು. ಅಲ್ಲದೆ, ಮುಂದಿನ ಬೆಳೆ ಕೈಸೇರುವವರೆಗೆ ಬ್ಯಾಂಕ್‌ನವರು ರೈತರನ್ನು ಸಾಲಕ್ಕಾಗಿ ಪೀಡಿಸದಂತೆ ಆಜ್ಞೆ ಹೊರಡಿಸಬೇಕೆಂದರು. ಕಳೆದ ಶತಮಾನದಲ್ಲಿ ಭಾರತದಲ್ಲಿ ಶೇ70ರಷ್ಟು ಕೃಷಿಕರಿದ್ದರು. ಆದರೆ, ಈಗ ಅದರ ಸಂಖ್ಯೆ 50ಕ್ಕೆ ಇಳಿದಿದೆ. ಕೃಷಿ ಲಾಭದಾಯಕವಾಗಿಲ್ಲ ಎಂದು ರೈತರು ಹಳ್ಳಿಗಳನ್ನು ತೊರೆದು ಪಟ್ಟಣ ಸೇರುತ್ತಿದ್ದಾರೆ. ಆದರೆ, ರೈತರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಹಾಗಾಗಿ ಇನ್ನಾದರೂ ಸರಕಾರಗಳು ರೈತರ ಏಳಿಗೆಗಾಗಿ ಕಾರ್ಯ ರೂಪಿಸಬೇಕಿದೆ. ಸಾವಯವ ಹಾಗೂ ಸಮಗ್ರ ಕೃಷಿಯನ್ನು ಅಳವಡಿಸುವ ಮೂಲಕ ರೈತರಿಗೆ ಹೆಚ್ಚು ಲಾಭವಾಗುವಂತಹ ಪ್ರಗತಿಪರ ಯೋಜನೆಗಳನ್ನು ರೂಪಿಸಿ ರೈತರಿಗೆ ತಲುಪುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕೃಷಿ ವಿವಿಯ ಕುಲಪತಿ ಡಾ.ಎಚ್.ಶಿವಣ್ಣ, ವಿಶ್ರಾಂತ ಕುಲಪತಿ ಡಾ.ಜೆ.ವಿ.ಗೌಡ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Write A Comment