ಬೆಂಗಳೂರು, ನ.20: ಪತ್ರಿಕೋದ್ಯಮವು ವಿಧಾನಸಭೆಯ ಮುಂದುವರಿದ ಭಾಗವಾಗಿದ್ದು, ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ಕರ್ನಾಟಕ ಮಾಧ್ಯಮ ಅಕಾಡಮಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ 30 ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸಭೆ ಹಾಗೂ ವಿಧಾನಪರಿಷತ್‌ಗಳಲ್ಲಿ ನಡೆಯುವ ಚರ್ಚೆಗಳನ್ನು ಜನತೆಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಯಶ ಸ್ವಿಯಾಗಿ ಮಾಡುತ್ತಿವೆ. ಹಾಗೆಯೇ ಸಮಾಜದಲ್ಲಿರುವ ಸಮಸ್ಯೆಗ ಳನ್ನು ಜನಪ್ರತಿನಿಧಿಗಳಿಗೆ ತಿಳಿಸುತ್ತಿವೆ. ಈ ಮೂಲಕ ಜನತೆ ಹಾಗೂಜನಪ್ರತಿನಿಧಿಗಳಿಗೆ ಸೇತುವೆಯಾಗಿ ಮಾಧ್ಯಮ ಮಹತ್ವವಾದ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದಲ್ಲಿ ನಡೆಯುವ ಹಲವು ವಿಷಯಗಳು ಜನಪ್ರತಿನಿ ಧಿಗಳಿಗೆ ಗೊತ್ತಿರುವುದಿಲ್ಲ. ಪತ್ರಿಕೆ ಇಲ್ಲವೆ ದೃಶ್ಯ ಮಾಧ್ಯಮಗಳಲ್ಲಿ ವರದಿಯಾದಾಗ ಮಾತ್ರ ಸಮಸ್ಯೆಗಳ ಗಂಭೀರತೆ ಅರಿವಾಗುತ್ತದೆ. ಇದೇ ರೀತಿಯಲ್ಲಿ ಜನಪ್ರತಿನಿಧಿಗಳು ಹಾಗೂ ಮಾಧ್ಯಮಗಳು ಜೊತೆ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಉತ್ತಮ ಸಮಾಜನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ದೃಶ್ಯಮಾಧ್ಯಮಗಳು ವರದಿಗಳನ್ನು ಉತ್ಪ್ರೇಕ್ಷೆ ಗೊಳಿಸುತ್ತಿವೆ. ಇದರಿಂದ ಜನತೆಗೆ ತಪ್ಪು ಸಂದೇಶಗಳು ರವಾನೆ ಯಾಗುತ್ತಿವೆ. ಈ ಕುರಿತು ದೃಶ್ಯ ಮಾಧ್ಯಮಗಳ ಪತ್ರಕರ್ತರು ಗಂಭೀರವಾಗಿ ಚಿಂತಿಸಬೇಕಾಗಿದೆ. ಆದರೆ ಪತ್ರಿಕಾ ಮಾಧ್ಯಮ ಇಂದಿಗೂ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲವು ವೇಳೆ ಮಾಧ್ಯಮಗಳು ಜನಪ್ರತಿನಿಧಿಗಳ ವಿರುದ್ಧವಾಗಿ ವರದಿ ಮಾಡುತ್ತವೆ. ಅದು ಜನಪ್ರತಿನಿಧಿಗಳಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಒಳ್ಳೆಯ ಅವಕಾಶ. ಯಾವುದೇ ಕಾರಣಕ್ಕೂ ಮಾಧ್ಯಮಗಳ ವಿರುದ್ಧ ಹಗೆ ಸಾಧಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮಾಧ್ಯಮ ಕ್ಷೇತ್ರಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ-2015ನ್ನು ಶಿರಸಿಯ ‘ಲೋಕಧ್ವನಿ’ ಪತ್ರಿಕೆಗೆ ನೀಡಲಾಯಿತು. ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿಯನ್ನು ಪತ್ರಕರ್ತ ಸುಭಾಷ ಬಣಗಾರ ಅವರಿಗೆ ಪ್ರದಾನ ಮಾಡಲಾಯಿತು. ಹಾಗೆಯೆ ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಯನ್ನು ಪತ್ರಕರ್ತ ಆರ್.ಮಂಜುನಾಥ್ ಅವರಿಗೆ ನೀಡಲಾಯಿತು.
ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ 30ರ ಸಂಭ್ರಮದ ಅಂಗವಾಗಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ 30 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಮೂಲಸೌಲಭ್ಯ ಅಭಿವೃದ್ಧಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್.ರೋಷನ್ ಬೇಗ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ ಮತ್ತಿತರರಿದ್ದರು.