ಬೆಂಗಳೂರು, ನ.20: ರಾಜ್ಯಾದ್ಯಂತ ವಕ್ಫ್ ಮಂಡಳಿಗೆ ಸೇರಿದ ಆಸ್ತಿಗಳ ಒತ್ತುವರಿ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಡಾ.ಖಮರುಲ್ ಇಸ್ಲಾಮ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಕೆಜೆಪಿ ಸದಸ್ಯ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಈವರೆಗೆ 854 ಒತ್ತುವರಿ ಪ್ರಕರಣಗಳು ದಾಖಲಾ ಗಿದ್ದು, 279 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಲು ಆದೇಶ ಮಾಡಲಾ ಗಿದೆ ಎಂದು ಹೇಳಿದ್ದಾರೆ. 279 ಪ್ರಕರಣಗಳ ಪೈಕಿ 63 ಪ್ರಕರಣಗಳಲ್ಲಿ ಸಂಬಂಧಿಸಿದ ಉಪವಿಭಾ ಗಾಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 79.71 ಕೋಟಿ ರೂ.ವೌಲ್ಯದ ವಕ್ಫ್ ಆಸ್ತಿಯನ್ನು ಸಂಬಂಧಪಟ್ಟ ಸಂಸ್ಥೆಗಳ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ 279 ಪ್ರಕರಣಗಳ ಪೈಕಿ 119 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಈ ಪ್ರಕರಣಗಳಲ್ಲಿ ಮಂಡಳಿಯ ಪರವಾಗಿ ನ್ಯಾಯವಾದಿಗಳು ವಿಚಾರಣೆಯಲ್ಲಿ ವಾದ ಮಂಡನೆಗೆ ನೇಮಕಗೊಂಡಿದ್ದಾರೆ ಎಂದು ಖಮರುಲ್ ಇಸ್ಲಾಮ್ ಹೇಳಿದ್ದಾರೆ.
ಬಿದಾಯಿ: ರಾಜ್ಯದಲ್ಲಿ ಶಾದಿಭಾಗ್ಯ(ಬಿದಾಯಿ) ಯೋಜನೆಯಡಿ ಅನುದಾನ ಪಡೆಯಲು ಈವರೆಗೆ 25,168 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ 13,340 ಫಲಾನುಭವಿಗಳಿಗೆ ಅನುದಾನ ನೀಡಲಾಗಿದೆ ಎಂದು ಬಿಜೆಪಿ ಸದಸ್ಯ ಉಮೇಶ್‌ಕತ್ತಿ ಕೇಳಿದ್ದ ಮತ್ತೊಂದು ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
