ಬೆಂಗಳೂರು: ಬಿಗ್ ಬಾಸ್ ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್ ಮತ್ತೊಬ್ಬ ಸ್ಪರ್ಧಿ ರವಿ ಮುರೂರು ಎಂಬುವವರಿಗೆ ಹೊಡೆದು ಸ್ಪರ್ಧೆಯಿಂದ ಹೊರಹಾಕಿಸಿಕೊಂಡದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಟಿವಿ ವಾಹಿನಿಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿತ್ತು.
ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ಅಂಗವಾಗಿ ವಾರಾಂತ್ಯದಲ್ಲಿ ನಡೆಯುವ ‘ವಾರದ ಕಥೆ ಕಿಚ್ಚನ ಜೊತೆ’ ಸಮಯದಲ್ಲಿ ಇದ್ದಕ್ಕಿದ್ದಂತೆ ರೊಚ್ಚಿಗೆದ್ದ ಹುಚ್ಚ ವೆಂಕಟ್ ಗಾಯಕ ರವಿ ಮೂರೂರ್ ಅವರ ಕಪಾಳಕ್ಕೆ ಬಾರಿಸಿದ್ದರು.
ಈಗ ಮೂಲಗಳ ಪ್ರಕಾರ ಪೊಲೀಸರು ಹುಚ್ಚ ವೆಂಕಟ್ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸಿ ಅವರನ್ನು ಬಂಧಿಸಬಹುದು ಎಂದು ತಿಳಿದುಬಂದಿದೆ.
ವಿವಾದಗಳ ಕೇಂದ್ರವೇ ಆಗಿರುವ ಹುಚ್ಚ ವೆಂಕಟ್ ಈ ಹಿಂದೆ ನಟಿ ಮಾಜಿ ಸಂಸದೆ ರಮ್ಯ ಅವರನ್ನು ಅಪಹರಿಸಿ ಮದುವೆಯಾಗುತ್ತೇನೆ ಎಂದು ಹೇಳಿದ್ದಾಗಲೂ ಪೊಲೀಸರು ಇವರನ್ನು ವಿಚಾರಣೆಗೆ ಒಳಪಡಿಸಿದ್ದರು. ಬಿಗ್ ಬಾಸ್ ನಿಂದ ಹೊರಬಿದ್ದ ಮೇಲೆ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರ ಮೇಲೂ ಹರಿಹಾಯ್ದಿದ್ದರು.
