ಕರ್ನಾಟಕ

ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂದಿರುಗಿಸಲು ದೇವನೂರು ಮಹದೇವ ನಿರ್ಧಾರ

Pinterest LinkedIn Tumblr

devanooru mahadevi

ಬೆಂಗಳೂರು, ನ.14: ದೇಶದಲ್ಲಿ ಸಂಭವಿಸುತ್ತಿರುವ ಅಸಹಿಷ್ಣತೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಹಿರಿಯ ಸಾಹಿತಿ ದೇವನೂರು ಮಹದೇವ ಅವರು ತಮಗೆ ಲಭ್ಯವಾಗಿರುವ ಪ್ರಶಸ್ತಿಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಪ್ರಶಸ್ತಿ ಪಡೆದ ವೇಳೆ ಸಿಕ್ಕಿರುವ ಸ್ಥಾನಮಾನಗಳನ್ನು ಹಿಂದಿರುಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು ಪಡೆದಿರುವ ಪ್ರಶಸ್ತಿಗಳನ್ನು ಸಾಂಕೇತಿಕವಾಗಿ ವಾಪಸ್ಸು ಮಾಡುತ್ತೇನೆ ಎಂದು ಹೇಳಿದ್ದಾರೆ.

ದೇವನೂರು ಮಹದೇವ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿದ್ದು, ಅವುಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ದೇಶದಲ್ಲಿ ಹಾಡಹಗಲೇ ಅಸಹನೆ, ಹಿಂಸಾಕೃತ್ಯಗಳು ಹೆಚ್ಚಾಗುತ್ತಿವೆ. ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಉಂಟಾಗಿರಲಿಲ್ಲ. ಯಾವುದೇ ಆಳ್ವಿಕೆಯು ಸಂವೇದನಾಶೀಲವಾಗಲು ಹಾಗೂ ಸಮಾಜಮುಖಿಯಾಗಲು ಲೇಖಕ, ಕಲಾವಿದ, ಪ್ರಜ್ಞಾವಂತರು ಸರ್ಕಾರಕ್ಕೆ ಅಂಕುಶದಂತೆ ಇರಬೇಕು ಎಂದು ನಂಬಿಕೊಂಡಿರುವ ನಾನು ಇತ್ತೀಚಿನ ಅಸಹಿಷ್ಣತೆಗಾಗಿ ಪ್ರಶಸ್ತಿ ಹಿಂದಿರುಗಿಸುತ್ತಿರುವ ಈ ಸಂದರ್ಭದಲ್ಲಿ ನನ್ನ ಸ್ವಭಾವಕ್ಕೆ ವಿರುದ್ಧವಾಗಿ ಸಂಯಮಿಸಿಕೊಂಡೇ ಬಂದೆ. ಆದರೆ, ಯಾವಾಗ ಕೆಲ ಲೇಖಕ-ಕಲಾವಿದರು ಆಳ್ವಿಕೆ ಪರ ಸಂಘಟಿತರಾಗಿ ನಿಂತರೋ ಅದು ಕೇಡಿನ ಲಕ್ಷಣ ಅನ್ನಿಸಿಬಿಟ್ಟಿತು.

ಇದಕ್ಕೆ ಜಿಗುಪ್ಸೆಗೊಂಡು ನಾನು ಪಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದೇನೆ. ಈಗ ಹಿಂದಿರುಗಿಸುತ್ತಿರುವುದು ಸಾಂಕೇತಿಕವಾಗಿ ಮಾತ್ರವೆ, ಯಾಕೆಂದರೆ ಅವುಗಳನ್ನು ಪಡೆದಿದ್ದರಿಂದ ಪರೋಕ್ಷವಾಗಿ ಪಡೆದಿರಬಹುದಾದ ಸ್ಥಾನಮಾನಗಳನ್ನು ಹಿಂದಿರುಗಿಸಲಾಗುತ್ತಿಲ್ಲ ಎಂಬ ಸಂಕೋಚವೂ ನನಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ನಮ್ಮ ಸ್ವಾತಂತ್ರ್ಯ ಹೋರಾಟದ ಕನಸುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ, ಸಾಮಾಜಿಕ ನ್ಯಾಯ ಇತ್ಯಾದಿ ಮೌಲ್ಯಗಳು ನೆಹರೂ ಯುಗದ ನಂತರ ಒಂದಲ್ಲಾ ಒಂದು ಕ್ಷೀಣಿಸುತ್ತಾ ಬಂದು ಈಗ ತತ್ತರಿಸುತ್ತಿವೆ. ಈ ಮೌಲ್ಯಗಳು ಕಣ್ಣಿಗೆ ಕಾಣುವಂತೆ ಭೌತಿಕ ಅಲ್ಲದಿರಬಹುದು, ಆದರೆ, ಇವು ನಾವು ಕಟ್ಟಬೇಕಾದ ಸಾಂಸ್ಕೃತಿಕ, ಸಾಮಾಜಿಕ ಭಾರತದ ಉಸಿರಾಟದಂತೆ ಎಂಬ ಈ ಅರಿವಿಲ್ಲದಿರುವುದೇ ಇಂದಿನ ಅಸಹಿಷ್ಣುತೆಗೆ ಕಾರಣವೆನ್ನಿಸುತ್ತಿದೆ ಎಂದಿದ್ದಾರೆ.

ಹಾಗಾಗಿ ಇಂದು ಅಸಹಿಷ್ಣುತೆಯ ಅಟ್ಟಹಾಸ ಎಸಗುತ್ತಿರುವ ಗುಂಪಿಗೆ ತಾನು ಗೆಲ್ಲಿಸಿದವರೇ ಕೇಂದ್ರ ಸರ್ಕಾರವಾಗಿರುವುದರಿಂದ ತಾನು ಏನೇ ಮಾಡಿದರೂ ಮೇಲಿನವರ ಕೃಪೆಯಿಂದ ಬಚಾವಾಗಬಲ್ಲೆ ಎಂಬ ಭೀತಿಯಿಲ್ಲದ ಭಾವನೆ ಇರುವುದರಿಂದಲೇ ಈ ಹಿಂದೆ ಕದ್ದುಮುಚ್ಚಿ ನಡೆಯುತ್ತಿದ್ದ ಅಸಹನೆಯ ಹಿಂಸಾಕೃತ್ಯಗಳು ಇಂದು ಹಾಡಹಗಲೇ ಜರುಗುತ್ತಿವೆ. ಈ ಹಿಂದೆ ಎಂದೂ ಇಂಥ ಪರಿಸ್ಥಿತಿ ಉಂಟಾಗಿರಲಿಲ್ಲ. ಇದನ್ನು ಆತ್ಮಾವಲೋಕನ ಮಾಡಿಕೊಂಡರೆ ಮಾತ್ರ ಹಾಲಿ ಕೇಂದ್ರ ಸರ್ಕಾರವು, ತಾನೂ ಸರ್ಕಾರ ಕೊಡಬಲ್ಲುದು ಎಂದು ಅವರು ತಿಳಿಸಿದ್ದಾರೆ.

Write A Comment