ಕರ್ನಾಟಕ

ಮೈಸೂರು ಭಾಗಶಃ ಬಂದ್; ಲಘು ಲಾಠಿ ಪ್ರಹಾರ

Pinterest LinkedIn Tumblr

Latietuಮೈಸೂರು: ಟಿಪ್ಪು ಜಯಂತಿಯ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ ಗಲಭೆಯನ್ನು ಖಂಡಿಸಿ ಸಂಘ ಪರಿವಾರದ ಕಾರ್ಯಕರ್ತರು ಕರೆ ನೀಡಿದ್ದ ‘ಮೈಸೂರು ಬಂದ್‌’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆ 8 ಗಂಟೆಯಿಂದಲೇ ಬೀದಿಗೆ ಇಳಿದ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಬಂದ್‌ಗೆ ಬೆಂಬಲ ಸೂಚಿಸುವಂತೆ ಕೋರಿದರು. ಕುವೆಂಪುನಗರ, ಬನ್ನಿಮಂಟಪ ಹಾಗೂ ಸಾತಗಳ್ಳಿ ಬಸ್‌ ಡಿಪೊಗೆ ಮುತ್ತಿಗೆ ಹಾಕಿ ಸಂಚಾರ ತಡೆದರು. ನಗರ ಸಾರಿಗೆ ಬಸ್ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಬಳಿಕ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಗರ ಬಸ್‌ ನಿಲ್ದಾಣದ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದರು. ದೇವರಾಜ ಅರಸು ರಸ್ತೆ, ಶಿವರಾಮಪೇಟೆ, ಸಯ್ಯಾಜಿರಾವ್‌ ರಸ್ತೆ, ಧನ್ವಂತ್ರಿ ರಸ್ತೆ, ಅಶೋಕ ರಸ್ತೆ, ಗಾಂಧಿ ಚೌಕದಲ್ಲಿ ಅಂಗಡಿ ಮುಂಗಟ್ಟು ಹಾಗೂ ಶಾಲಾ–ಕಾಲೇಜುಗಳನ್ನು ಬಲವಂತವಾಗಿ ಮುಚ್ಚಿಸಿದರು.

ಮೆರವಣಿಗೆಯ ಬಳಿಕ ಎಲ್ಲ ಕಾರ್ಯಕರ್ತರು ಚಿಕ್ಕಗಡಿಯಾರದ ಬಳಿ ಜಮಾಯಿಸಿದರು. ಪ್ರತಿಭಟನಾ ಸಭೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ ಅನ್ಯ ಕೋಮಿನ ಯುವಕನನ್ನು ಪ್ರತಿಭಟನಾಕಾರರು ಹಿಡಿಯಲು ಯತ್ನಿಸಿದರು. ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದರು. ಈ ವೇಳೆ ಯುವಕನ ಮೇಲೆ ಹಲ್ಲೆ ಯತ್ನವೂ ನಡೆಯಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

Write A Comment