ಕರ್ನಾಟಕ

ಕಲಬುರ್ಗಿ ಹತ್ಯೆ ಮಾಡಿದ ರೀತಿಯಲ್ಲೇ ನಿಮ್ಮ ಅಂತ್ಯವೂ ಆಗಲಿದೆ: ಸಾಹಿತಿ ಗಿರೀಶ್ ಕಾರ್ನಾಡ್ ಗೆ ಜೀವ ಬೆದರಿಕೆ

Pinterest LinkedIn Tumblr

Girish-Karnad

ಬೆಂಗಳೂರು: 265ನೇ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಗೆ ಜೀವ ಬೆದರಿಕೆಯೊಡ್ಡಲಾಗಿದೆ.

ನಿನ್ನೆ ರಾತ್ರಿ ಅನಾಮಧೇಯ ವ್ಯಕ್ತಿಯೊಬ್ಬ ಗಿರೀಶ್ ಕಾರ್ನಾಡ್ ಗೆ ಟ್ವಿಟರ್ ಮೂಲಕ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ 10:30ರ ಸುಮಾರಿಗೆ ವ್ಯಕ್ತಿಯೊಬ್ಬ, ಕನ್ನಡಿಗರನ್ನು ಕೆಣಕಿದರೆ ಸಂಶೋಧಕ ಕಲಬುರ್ಗಿಯವರಿಗಾದ ಗತಿ ಗಿರೀಶ್ ಕಾರ್ನಾಡ್ ಗೂ ಆಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ನಕಲಿ ಟ್ವಿಟ್ಟರ್ ಖಾತೆಯಿಂದ ಈ ಬೆದರಿಕೆಯೊಡ್ಡಲಾಗಿದೆ. ಟಿಪ್ಪು ಸುಲ್ತಾನ್ ಅವರ 265ನೇ ಜಯಂತಿ ಅಂಗವಾಗಿ ವಿಧಾನಸೌಧದಲ್ಲಿ ಸರ್ಕಾರ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರೀಶ್‌ ಕಾರ್ನಾಡ್ ಅವರು, ಕೆಂಪೇಗೌಡರು ಸ್ವಾತಂತ್ರ್ಯ ಸೇನಾನಿ ಅಲ್ಲ ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಹೇಳಿಕೆ ನೀಡಿದ್ದರು.

ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಕಾರ್ನಾಡ್ ಅವರಿಗೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಕಾರ್ನಾಡ್ ಅವರ ಈ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಗಿರೀಶ್ ಕಾರ್ನಾಡ್ ಬಂಧನಕ್ಕೆ ಆಗ್ರಹಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ನಿನ್ನೆ ಸಾಹಿತಿ ಕಾರ್ನಾಡ್ ರಾಜ್ಯದ ಕ್ಷಮೆ ಯಾಚಿಸಿ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದರು.

Write A Comment