ರಾಷ್ಟ್ರೀಯ

ಎಫ್ ಡಿಐ ನಿಯಮಗಳನ್ನು ಗಣನೀಯ ಪ್ರಮಾಣದಲ್ಲಿ ಸಡಿಲಗೊಳಿಸಿದ ಕೇಂದ್ರ ಸರ್ಕಾರ; ಡಿಟಿಎಚ್, ಎಫ್ಎಂ ರೇಡಿಯೋ, ಸುದ್ದಿ ಚಾನಲ್‍ಗಳಲ್ಲಿ ಹೂಡಿಕೆ ಮಿತಿ ಹೆಚ್ಚಳ

Pinterest LinkedIn Tumblr

FDI

ನವದೆಹಲಿ: ಕೇಂದ್ರ ಸರ್ಕಾರ ತೀವ್ರ ಗತಿಯಲ್ಲಿ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಮಂಗಳವಾರ ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಗಣನೀಯ ಪ್ರಮಾಣದಲ್ಲಿ ಸಡಿಲಗೊಳಿಸಿದೆ.

ನಾಗರಿಕ ವಿಮಾನಯಾನ, ಬ್ಯಾಂಕಿಂಗ್, ರಕ್ಷಣೆ, ರಿಟೇಲ್, ಸುದ್ದಿ ಪ್ರಸಾರ ಸೇರಿದಂತೆ ಹದಿನೈದು ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್ ಡಿಐ) ಮಿತಿಯನ್ನು ಹೆಚ್ಚಿಸಿದೆ. ಕೇಬಲ್ ನೆಟ್‍ವರ್ಕ್ ಮತ್ತು ಡಿಟಿಎಚ್‍ನಲ್ಲಿ ಶೇ.100ರಷ್ಟು ಎಫ್ಡಿಐಗೆ ಅನುಮತಿ ನೀಡಿದರೆ, ಸುದ್ದಿ ಪ್ರಸಾರ ಮತ್ತು ಸುದ್ದಿ ಚಾನಲ್‍ಗಳಲ್ಲಿನ ಮಿತಿಯನ್ನು ಈಗಿನ ಶೇ.26ರಿಂದ ಶೇ.49ಕ್ಕೆ ಹೆಚ್ಚಿಸಿದೆ.

ರಿಟೇಲ್ ಕ್ಷೇತ್ರದಲ್ಲಿನ ಎಫ್ಡಿಐ ನಿಯಮಗಳನ್ನು ಸಡಿಸಿರುವ ಕೇಂದ್ರ ಸರ್ಕಾರ ಸಿಂಗಲ್ ಬ್ರಾಂಡ್ ರಿಟೇಲ್ ನಲ್ಲಿ ತೆರಿಗೆ ಮುಕ್ತ ಮತ್ತು ಸೀಮಿತ ಪಾಲುದಾರಿಕೆ ಕಂಪನಿಗಳಲ್ಲಿ ಅನುಮತಿ ರಹಿತವಾಗಿ ಶೇ.100ರಷ್ಟು ಹೂಡಿಕೆಗೆ ಅವಕಾಶ ನೀಡಿದೆ. ರಕ್ಷಣಾ ಕ್ಷೇತ್ರದಲ್ಲಿನ ಹೂಡಿಕೆ ನಿಯಮಗಳನ್ನೂ ಸಡಿಲಿಸಲಾಗಿದೆ.

ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್ಐಪಿಬಿ) ಇದುವರೆಗೂ ರು.3,000 ಕೋಟಿ ವರೆಗಿನ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿತ್ತು, ಈಗ ಈ ಅಧಿಕಾರವನ್ನು ರು.5,000 ಕೋಟಿಗೆ ಹೆಚ್ಚಿಸಲಾಗಿದೆ. ನಿರ್ಮಾಣ ಕ್ಷೇತ್ರದಲ್ಲಿ ಕನಿಷ್ಠ ಬಂಡವಾಳ ಷರತ್ತು ಮತ್ತು ನಿರ್ಮಾಣ ವಿಸ್ತೀರ್ಣ ನಿಯಮಗಳನ್ನು ತೆಗೆದುಹಾಕಲಾಗಿದೆ.

ಇದೇ ಸಂದರ್ಭದಲ್ಲಿ ವಿದೇಶಿ ಕಂಪನಿಗಳು ಯಾವುದೇ ಸಂದರ್ಭದಲ್ಲಿ ಹೊರಹೋಗುವಂತೆ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಪೂರ್ಣಗೊಂಡ ಯೋಜನೆಗಳ ಕಾರ್ಯಾಚರಣೆಯಲ್ಲಿ ಶೇ.100ರಷ್ಟು ಎಫ್ಡಿಐಗೆ ಅನುಮತಿ ನೀಡಲಾಗಿದ್ದು, ಟೌನ್‍ಶಿಪ್, ಶಾಪಿಂಗ್ ಮಾಲ್, ವಾಣಿಜ್ಯ ಸಂಕೀರ್ಣಗಳ ನಿರ್ವಹಣೆ ಕ್ಷೇತ್ರವನ್ನೂ ಸಂಪೂರ್ಣ ಎಫ್ಡಿಐಗೆ ಮುಕ್ತಗೊಳಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

ರಕ್ಷಣಾ ಕ್ಷೇತ್ರದಲ್ಲಿ ಯಾವುದೇ ಅನುಮತಿ ಇಲ್ಲದೆ ಶೇ.49ರಷ್ಟು ವಿದೇಶಿ ಹೂಡಿಕೆಗೆ ಅನುಮತಿ ನೀಡಲಾಗಿದೆ. ಅದಕ್ಕಿಂತಲೂ ಹೆಚ್ಚು ಹೂಡಿಕೆ ಮಾಡುವಂತಿದ್ದರೆ ಮಾತ್ರ ಎಫ್ಐಪಿಬಿ ಅನುಮತಿ ಪಡೆದರೆ ಸಾಕು. ಈ ಹಿಂದೆ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಕುರಿತ ಸಚಿವ ಸಂಪುಟ ಸಮಿತಿ ಅನುಮತಿ ಪಡೆಯಬೇಕಾಗಿತ್ತು.

ಪ್ರಸಾರ ಕ್ಷೇತ್ರದಲ್ಲಿ ಡಿಟಿಎಚ್, ಟೆಲಿಪೋಟ್ರ್ಸ್, ಮೊಬೈಲ್ ಟಿವಿ ಮತ್ತು ಕೇಬಲ್ ನೆಟ್‍ವರ್ಕ್‍ನಲ್ಲಿ ಶೇ.100ರಷ್ಟು ಎಫ್ಡಿಐಗೆ ಅನುಮತಿ ನೀಡಲಾಗಿದೆ. ಈ ಪೈಕಿ ಶೇ.49ರಷ್ಟು ಅನುಮತಿ ಇಲ್ಲದೆ ಹೂಡಿಕೆ ಮಾಡಬಹುದು ಮತ್ತು ಅದಕ್ಕಿಂತಲೂ ಹೆಚ್ಚಾದಲ್ಲಿ ಎಫ್ಐಪಿಬಿ ಅನುಮೋದನೆ ಪಡೆಯಬೇಕು. ಎಫ್ಎಂ ರೇಡಿಯೋ, ಸುದ್ದಿ ಚಾನಲ್ ಗಳು, ಸುದ್ದಿ ಪ್ರಸಾರ ನೆಟ್‍ವರ್ಕ್, ಅಪ್ ಲಿಂಕಿಂಗ್ ಆಫ್ ನ್ಯೂಸ್ ಕ್ಷೇತ್ರದಲ್ಲಿ ಎಫ್ ಡಿಐ ಮಿತಿಯನ್ನು ಈಗಿರುವ ಶೇ.26ರಿಂದ ಶೇ.49ಕ್ಕೆ ಹೆಚ್ಚಿಸಲಾಗಿದೆ.

Write A Comment