ಕರ್ನಾಟಕ

ವಿಕಿಪೀಡಿಯಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಿನ ಹಿಂದೆ ‘ಸ್ಯಾಮ್ಯುಯಲ್’ ! ಕುಚೇಷ್ಟೆ ಮಾಡಿದ ಕಿಡಿಗೇಡಿಗಳು

Pinterest LinkedIn Tumblr

Siddaramaiah

ಬೆಂಗಳೂರು: ಗೋಮಾಂಸ ತಿನ್ನುತ್ತೇನೆ, ಏನೀಗ ಎಂದು ಕೇಳಿದ ಮಾರನೇ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನ ಹಿಂದೆ ಸ್ಯಾಮ್ಯುಯಲ್ ಎಂಬ ಅಡ್ಡ ಹೆಸರನ್ನು ಸೇರಿಸಿರುವ ಕಿಡಿಗೇಡಿಗಳು, ವಿಕಿಪೀಡಿಯಾದಲ್ಲಿ ಕುಚೇಷ್ಟೆ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಬಗ್ಗೆ ನೀವು ಈ ಕ್ಷಣಕ್ಕೆ ಮಾಹಿತಿ ಪಡೆಯುವುದಕ್ಕೇನಾದರೂ ಸರ್ಚ್ ನಡೆಸಿದರೆ, ಅಲ್ಲಿ ಅವರ ಹೆಸರು `ಸ್ಯಾಮ್ಯಯಲ್ ಸಿದ್ದರಾಮಯ್ಯ’ ಎಂಬ ಮಾಹಿತಿ ಲಭ್ಯವಾಗುತ್ತಿದೆ.

ವಿಚಿತ್ರವೆಂದರೆ ಅಕ್ಟೋಬರ್ 30 ರಂದು ಸಿದ್ದರಾಮಯ್ಯ “ನಾನು ಗೋಮಾಂಸ ತಿನ್ನುತ್ತೇನೆ, ಅದನ್ನು ಕೇಳಲು ನೀವ್ಯಾರು” ಎಂದು ಹೇಳಿಕೆ ನೀಡಿದ್ದರು. ಮಾರನೇ ದಿನವೇ ಅವರ ಹೆಸರಿನ ಹಿಂದೆ ಸ್ಯಾಮ್ಯುಯಲ್ ಎಂಬುದು ಸೇರಿಕೊಂಡಿದೆ.

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಾರೋ ಕಿಡಿಗೇಡಿಗಳು ಕುಚೋದ್ಯಕ್ಕಾಗಿ ವಿಕ್ಕಿಪೀಡಿಯಾದಲ್ಲಿ ಈ ರೀತಿ ಎಡಿಟ್ ಮಾಡಿ ಮಾಹಿತಿ ಪೋಸ್ಟ್ ಮಾಡಿರಬಹುದೆಂಬ ಅನುಮಾನವನ್ನು ಸೃಷ್ಟಿಸಿದೆ.ಎಲ್ಲೆಲ್ಲಿ ಸಿದ್ದರಾಮಯ್ಯ ಅವರ ಹೆಸರು ಬರುತ್ತದೆಯೋ ಅಲ್ಲೆಲ್ಲ ಹೆಚ್ಚಿನ ಕಡೆಗಳಲ್ಲಿ ಸ್ಯಾಮ್ಯುಯಲ್ ಎಂಬ ಶಬ್ದವನ್ನು ಸೇರಿಸಲಾಗಿದೆ. ಸಿದ್ದರಾಮಯ್ಯ ಅವರು ಗೋಮಾಂಸ ಭಕ್ಷಣೆ ಬಗ್ಗೆ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆಯೇ ಎಂಬ ಅನುಮಾನವೂ ಕಾಡುತ್ತಿದೆ.

ವೈಯಕ್ತಿಕ ಮಾಹಿತಿಯಲ್ಲಿ ಸಿದ್ದರಾಮಯ್ಯ ಅವರ ಒಂದು ಭಾವಚಿತ್ರವನ್ನು ಹಾಕಲಾಗಿದ್ದು, ಅದರ ಮೇಲ್ಗಡೆ ಸ್ಯಾಮ್ಯುಯಲ್ ಸಿದ್ದರಾಮಯ್ಯ ಎಂದು ಪ್ರಕಟಿಸಲಾಗಿದೆ. ಸ್ಯಾಮ್ಯುಯಲ್ ಸಿದ್ದರಾಮಯ್ಯ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಮೇ 13, 2013ರಲ್ಲಿ ಅಧಿಕಾರ ಸ್ವೀಕರಿಸಿದರು ಎಂಬ ವಿವರಣೆಯೊಂದಿಗೆ ಅವರು ಅಲಂಕರಿಸಿದ ರಾಜಕೀಯ ಸ್ಥಾನಮಾನಗಳ ವಿವರಣೆ ನೀಡಲಾಗಿದೆ.ಸ್ಯಾಮ್ಯುಯಲ್ ಸಿದ್ದರಾಮಯ್ಯ ನಾಸ್ತಿಕರಾಗಿದ್ದು, ಸಮಾಜವಾದ, ಜಾತ್ಯತೀತವಾದ ಹಾಗೂ ಜಾತಿ ಪದ್ಧತಿ ವಿರೋಧಿಯಾಗಿದ್ದಾರೆ ಎಂಬಿತ್ಯಾದಿ ವಿವರಗಳಿವೆ.

ಬದಲಾಗಿದ್ದು ಯಾವಾಗ?
ಅಕ್ಟೋಬರ್ 31 ರಂದು Girish031192 ಎಂಬ ವಿಕಿಪೀಡಿಯಾ ಯೂಸರ್ ನೇಮ್ ಹೊಂದಿರುವ ವ್ಯಕ್ತಿಯೊಬ್ಬ ಈ ಕೆಲಸ ಮಾಡಿದ್ದಾನೆ. ವಿಕಿಪೀಡಿಯಾ ಹಿಸ್ಟರಿಯಲ್ಲಿ ಇದು ದಾಖಲಾಗಿದೆ. ಅಂದು ಆತ ಸಿದ್ದರಾಮಯ್ಯ ಅವರ ಸರ್ ನೇಮ್ ಅನ್ನು ಬದಲಾಯಿಸಿದ್ದಾನೆ. ಇದನ್ನು ಮೊಬೈಲ್ ಮೂಲಕ ಮಾಡಿದ್ದಾನೆ ಎಂದು ತೋರಿಸುತ್ತದೆ. ನ.3 ರಂದು ಕೂಡ ಕೊಂಚ ಬದಲಾವಣೆ ಮಾಡಲು ಹೋಗಿ, ಏನನ್ನೂ ಮಾಡದೇ ಹಾಗೆಯೇ ಬಿಡಲಾಗಿದೆ.

ನೆಹರುಗೆ ಸರ್ಕಾರಿ ಕಂಪ್ಯೂಟರ್ ನಲ್ಲೇ ಅವಮಾನ ಜುಲೈ ತಿಂಗಳಲ್ಲೂ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರಿಗೆ ಇದೇ ರೀತಿಯ ಅವಮಾನ ಮಾಡಲಾಗಿತ್ತು. ನೆಹರು ಅವರ ತಾತನ ಹೆಸರು ಗಂಗಾಧರ ನೆಹರು, ಇವರು ಮುಸ್ಲಿಂ ಆಗಿದ್ದು, ನಿಜವಾದ ಹೆಸರು ಘೈಸುದ್ದೀನ್ ಘಾಝಿ ಎಂದು ಸೇರಿಸಲಾಗಿತ್ತು. ಇದರ ಐಪಿ ಅಡ್ರೆಸ್ ಹುಡುಕಿದಾಗ ಅದು ಭಾರತ ಸರ್ಕಾರದ ಕಚೇರಿಯ ಕಂಪ್ಯೂಟರ್ ಅನ್ನೇ ತೋರಿಸಿತ್ತು.

Write A Comment