ಧಾರವಾಡ, ಅ.20: ಕಳೆದ ತಿಂಗಳು ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು ವಾಮಾಚಾರಿಗಳ ದುಷ್ಕೃತ್ಯಕ್ಕೆ ಬಲಿಯಾಗಿ ಶವಗಳಾಗಿ ಪತ್ತೆಯಾಗಿದ್ದಾರೆ. ಸೆ. 25ರಂದು ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಿಂದ ಅಪಹರಣಕ್ಕೊಳಗಾಗಿದ್ದ ಈರಪ್ಪಶಿರಸಂಗಿ ಎಂಬವರ ಪುತ್ರರಾದ ನಾಗರಾಜ ಶಿರಸಂಗಿ (13) ಹಾಗೂ ಆಕಾಶ ಶಿರಸಂಗಿ (8) ಎಂಬ ಬಾಲಕರ ಮೃತ ದೇಹಗಳು ಗ್ರಾಮದ ತುಪ್ಪರಿ ಹಳ್ಳದಲ್ಲಿ ಮಂಗಳವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವರಲ್ಲಿ ಓರ್ವ ಬಾಲಕನ ಶಿರಚ್ಛೇದ ಮಾಡಲಾಗಿದೆ.
ನಿಧಿಯಾಸೆಗಾಗಿ ವಾಮಾಚಾರ ಪ್ರಯೋಗ ಮಾಡಿ ಮಕ್ಕಳನ್ನು ಈ ರೀತಿ ಬಲಿ ಕೊಡಲಾಗಿದೆ. ಮಕ್ಕಳು ಅಪಹರಣವಾಗಿರುವ ಬಗ್ಗೆ ದೂರು ದಾಖಲಿಸಿದರೂ ಪೊಲೀಸರು ತೀವ್ರಗತಿಯಲ್ಲಿ ಹುಡುಕಾಟ ನಡೆಸಲಿಲ್ಲ. ಇದರಲ್ಲಿ ಪೊಲೀಸರ ವೈಫಲ್ಯವೂ ಇದೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತಂತೆ ಉನ್ನತ ಹಂತದ ತನಿಖೆಯಾಗಬೇಕು. ಆರೋಪಿಗಳಿಗೆ ತಕ್ಕೆ ಶಿಕ್ಷೆಯಾಗಬೇಕು ಎಂದೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ವೈದ್ಯಾಧಿಕಾರಿಗಳು ಸ್ಥಳದಲ್ಲೇ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿದರು. ಸೆ. 25 ರಂದು ನಾಗರಾಜ ಮನೆ ಬಿಟ್ಟು ಹೋಗುವಾಗ ನೀಲಿ ಬಣ್ಣದ ಹಾಫ್ ಪ್ಯಾಂಟ್ ಹಾಗೂ ಆಕಾಶ ಕಟ್ಟಿಗೆ ಬಣ್ಣದ ಹಾಫ್ ಪ್ಯಾಂಟ್ ಧರಿಸಿದ್ದ. ಈಗಲೂ ಆ ಮೃತ ದೇಹಗಳ ಮೇಲೆ ಅದೇ ಬಣ್ಣದ ಬಟ್ಟೆಗಳಿದ್ದದ್ದು ಕಂಡು ಬಂದಿದೆ.
ದೇಹದ ಶೇ.90ರಷ್ಟು ಭಾಗ ಕೊಳೆತು ಹೋಗಿದ್ದರಿಂದ ಬಾಲಕರ ಮುಖಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ: ತಮ್ಮ ಮಕ್ಕಳು ಅಪಹರಣಕ್ಕೊಳಗಾದ ಬಾಲಕರ ಪೋಷಕರಿಗೆ ತಮ್ಮ ಮಕ್ಕಳ ಶವಗಳನ್ನು ಕಂಡು ಬರಸಿಡಿಲು ಬಡಿದಂತಾಗಿದೆ. ಬಹಳ ವರ್ಷಗಳ ನಂತರ ಆ ದಂಪತಿಗೆ ಜನಿಸಿದ್ದ ಇಬ್ಬರೂ ಮಕ್ಕಳು ಹೆಣವಾಗಿದ್ದನ್ನು ಕಂಡು ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದ ಅಧಿಕಾರಿಗಳು, ಶಾಸಕರು ಹಾಗೂ ಮಾಜಿ ಶಾಸಕರು: ಮಕ್ಕಳ ಮೃತ ದೇಹಗಳು ಪತ್ತೆಯಾದ ಸುದ್ದಿ ತಿಳಿದ ತಕ್ಷಣವೇ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ವಂಶಿ ಕೃಷ್ಣ, ಡಿವೈಎಸ್ಪಿಓಲೇಕಾರ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪಸೇರಿದಂತೆ ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಸಿಪಿಐ ಹಾಗೂ ಪಿಎಸ್ಐಗಳೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನ ದಳದ ಸಿಬ್ಬಂದಿ ಕೂಡ ಭೇಟಿ ನೀಡಿದ್ದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಚೋಳನ್, ಬಾಲಕರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ನಿಯೋಜನೆ ಮಾಡಲಾಗಿತ್ತು. ಬಾಲಕರಿಗಾಗಿ ಶೋಧನಾ ಕಾರ್ಯ ಪ್ರಗತಿಯಲ್ಲಿತ್ತು. ಆದರೆ, ಈ ರೀತಿ ಬಾಲಕರ ಶವ ಪತ್ತೆಯಾಗಿರುವುದು ವಿಪರ್ಯಾಸ. ಮಕ್ಕಳ ಮರಣೋತ್ತರ ಪರೀಕ್ಷೆಗಾಗಿ ವಿಶೇಷ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಅವರ ಅಂತಿಮ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
