ಕರಾವಳಿ

ರಾಜ್ಯಾದ್ಯಂತ ಪ್ಲಾಸ್ಟಿಕ್ ನಿಷೇಧ

Pinterest LinkedIn Tumblr

plastic

ಬೆಂಗಳೂರು, ಅ.20: ಪರಿಸರದ ಮೇಲೆ ದುಷ್ಪರಿಣಾಮ ಬೀರುವಂತಹ 40 ಮೈಕ್ರಾನ್‌ಗಿಂತಲೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ರಾಜ್ಯದಲ್ಲಿ ನಿಷೇಧಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ 40 ಮೈಕ್ರಾನ್‌ಗಿಂತಲೂ ಕಡಿಮೆ ಪ್ರಮಾಣದ ಎಲ್ಲ್ಲ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಣೆ, ಮಾರಾಟ, ವಿತರಣೆ ಹಾಗೂ ಬಳಕೆಯನ್ನು ರಾಜ್ಯಾದ್ಯಂತ ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಪ್ಲಾಸ್ಟಿಕ್ ಹಾನಿಕಾರಕ, ಅದರ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಈ ನಿಷೇಧ ವನ್ನು ವಿಧಿಸಲಾಗಿದೆ. ರಾಜ್ಯದಲ್ಲಿ 450 ಪ್ಲಾಸ್ಟಿಕ್ ಉತ್ಪಾದನಾ ಕಂಪೆನಿಗಳಿವೆ. ಈ ಕಂಪೆನಿಗಳು 40 ಮೈಕ್ರಾನ್‌ಗಿಂತಲೂ ಹೆಚ್ಚು ಪ್ರಮಾಣದ ಪ್ಲಾಸ್ಟಿಕ್ ಉತ್ಪಾದನೆ ಮಾಡಿ ರಫ್ತು ಮಾಡಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಆದುದರಿಂದ, ಸರಕಾರದ ಈ ನಿರ್ಧಾರದಿಂದ ಪ್ಲಾಸ್ಟಿಕ್ ತಯಾರಿಕಾ ಕಂಪೆನಿಗಳಿಗೆ ಯಾವುದೆ ನಷ್ಟ ಉಂಟಾಗುವುದಿಲ್ಲ. ಜೊತೆಗೆ, ಇಂತಹ ಪ್ಲಾಸ್ಟಿಕ್‌ನಿಂದ ಕೃಷಿ ಕೊಳವೆಗಳು(ಪೈಪುಗಳು) ಮತ್ತು ಸಿಂಪಡಣಾ ಉಪಕರಣಗಳು (ಸ್ಪ್ರಿಂಕ್ಲರ್ ಎಕ್ವಿಪ್‌ಮೆಂಟ್ಸ್) ತಯಾರಿಸಬಹುದಲ್ಲದೆ, ಡಾಂಬರು ರಸ್ತೆಗಳನ್ನು ನಿರ್ಮಿಸಬಹುದು ಎಂದು ಅವರು ತಿಳಿಸಿದರು.

ರಾಜ್ಯ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ಸಾಮಾನ್ಯ ನಿಯಮಾವಳಿಗಳು-2006 ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದ್ದು, ಈ ತಿದ್ದುಪಡಿಯಿಂದಾಗಿ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಳವಡಿಸಿಕೊಂಡಿರುವ ಪಿ.ಸಿ.ಹೋಟಾ ಸಮಿತಿಯ ಬಹುತೇಕ ಶಿಫಾರಸುಗಳನ್ನು ರಾಜ್ಯ ಸರಕಾರದ ವಿವಿಧ ಇಲಾಖೆಗಳ ನೇರ ನೇಮಕಾತಿಗಳಲ್ಲೂ ಅಳವಡಿಸಿ ಕೊಳ್ಳಲಾಗುವುದು. ಇಲಾಖೆಗಳಲ್ಲಿನ ‘ಸಿ’ ಗುಂಪಿನ ಹುದ್ದೆಗಳಿಗೆ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತವೆ. ಸಂದರ್ಶನ ಗಳಿರುವುದಿಲ್ಲ. ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅವರನ್ನು ನೇರ ನೇಮಕಾತಿ ಮಾಡಲಾಗುವುದು. ಇದರಿಂದ ನೇಮಕಾತಿಗಳಲ್ಲಿ ಕ್ಷಿಪ್ರತೆ, ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಹೆಚ್ಚುತ್ತದೆ ಎಂದು ಅವರು ತಿಳಿಸಿದರು. ಎ ಮತ್ತು ಬಿ ಗುಂಪಿನ ಹಾಗೂ ಸಿ ಗುಂಪಿನ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ ಹಾಗೂ ಕಾರ್ಯ ಸ್ವರೂಪವನ್ನು ಆಧರಿಸಿ ಪಠ್ಯಕ್ರಮವನ್ನು ನಿಗದಿಪಡಿಸ ಲಾಗುವುದು. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಗೆ ಉತ್ತರಿಸುವ ಸಂದರ್ಭದಲ್ಲಿ ಅಭ್ಯರ್ಥಿಯ ಪ್ರತಿ ತಪ್ಪುಉತ್ತರಕ್ಕೆ ಶೇಕಡಾ 0.25 ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುವುದು ಎಂದು ಅವರು ಹೇಳಿದರು. ಅಂತೆಯೇ, ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಬಹಿರಂಗಪ ಡಿಸದಿರಲೂ ಸೂಚಿಸಲಾಗಿದೆ. ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಯ ಸಿಂಧುತ್ವದ ಕಾಲಾವಧಿಯ ವಿವರಗಳನ್ನು ಸ್ಪಷ್ಟಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ನೌಕರರ ಸೇವಾ ಸಂಘಗಳಿಗೆ ಮಾನ್ಯತೆ: ರಾಜ್ಯ ನಾಗರಿಕ ಸೇವಾ(ಸರಕಾರಿ ನೌಕರರ ಸೇವಾ ಸಂಘಗಳಿಗೆ ಮಾನ್ಯತೆ ನೀಡಿಕೆ ) ನಿಯಮಗಳು-2015 ಕ್ಕೆ ಸಂಪುಟ ಅನುಮೋದಿಸಿದೆ. ಇದರಿಂದ ಸರ ಕಾರಿ ನೌಕರರ ಸೇವಾ ಸಂಘಗಳು ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದನಂತರ, ಮಾನ್ಯತೆ ನೀಡುವ ಮುನ್ನ, ಸಾರ್ವಜನಿಕರಿಂದ ಆಕ್ಷೇಪಣೆ ಗಳನ್ನು ಸ್ವೀಕರಿಸಲು 15 ದಿನಗಳ ಕಾಲಾವಕಾಶ ನೀಡಿದ ಬಳಿಕ ಅರ್ಜಿ ಯನ್ನು ಇತ್ಯರ್ಥಪಡಿಸಬಹುದಾಗಿದೆ ಎಂದು ಅವರು ಹೇಳಿದರು.

ಅರಣ್ಯ ಇಲಾಖೆಯ ಸೇವಾ ನೇಮಕಾತಿ ನಿಯಮಗಳು-2015 ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಅಳೆಯುವ ಮಾನದಂಡಗಳಲ್ಲಿ ಹಲವು ಬದಲಾ ವಣೆಗಳನ್ನು ತರಲಾಗಿದೆ. ಪ್ರಮುಖವಾಗಿ ಪುರುಷ ಅಭ್ಯರ್ಥಿಗಳಿಗೆ ಓಟದಲ್ಲಿ 1600 ಮೀಟರ್ ಕ್ರಮಿಸಲು ಏಳು ನಿಮಿಷಗಳು ನಿಗದಿಪಡಿಸಿದರೆ, ಮಹಿಳಾ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕರಿಗೆ 1000 ಮೀಟರ್ ದೂರ ಕ್ರಮಿಸಲು ಆರು ನಿಮಿಷಗಳ ಅವಧಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಸೋಲಿಗರು, ಹಕ್ಕಿಪಿಕ್ಕಿಗಳು, ಪರಿಶಿಷ್ಟ ಪಂಗಡಕ್ಕೆ ಸೇರಿದ ಗಿರಿಜನರು ಹಾಗೂ ಬುಡಕಟ್ಟು ಜನರು ಅರಣ್ಯ ರಕ್ಷಕರ ಹುದ್ದೆಗಳಿಗೆ ನೇಮಕಗೊಳ್ಳಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಒಂದನೆ ತರಗತಿಯಿಂದ ಏಳನೆ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಬೇಕೆಂಬ ಷರತ್ತನ್ನು ತೆಗೆದು ಹಾಕಲಾಗಿದೆ ಎಂದು ಅವರು ಹೇಳಿದರು. ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣಗಳಿಗೆ ತಿದ್ದುಪಡಿ ಮಾಡುವ ಸಂಬಂಧ ಶಾಸಕ ಕೆ.ಆರ್.ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ತಜ್ಞರ ಸಮಿತಿಯ ಹಾಗೂ ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿ, ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2015 ಕುರಿತಂತೆ ಸಚಿವ ಸಂಪುಟವು ಸುದೀರ್ಘ ಚರ್ಚೆ ನಡೆಸಿ, ಶಿಫಾರಸುಗಳನ್ನು ಮತ್ತೊಮ್ಮೆ ಪರಿಶೀಲಿಸಲು ನಿರ್ಣಯಿಸಿದೆ ಎಂದು ಜಯಚಂದ್ರ ತಿಳಿಸಿದರು.

ವಿಧಾನಮಂಡಲದ ಅಧಿವೇಶನ
ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ನ.16ರಿಂದ 27ರವರೆಗೆ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಜ.5ರೊಳಗಾಗಿ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಸಬೇಕೆ ಅಥವಾ ಬೇಡವೆ ಎಂಬುದರ ಕುರಿತು ಇನ್ನು ತೀರ್ಮಾನ ಕೈಗೊಂಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಸಂಪುಟದ ಇತರ ನಿರ್ಣಯಗಳು
ಬೆಂಗಳೂರು: ರಾಜ್ಯದ 87 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇ-ಟ್ರೇಡಿಂಗ್ ಅಳವಡಿಸಲು 2014-15ನೆ ಸಾಲಿನಲ್ಲಿ ಆರ್‌ಕೆವಿವೈ ಯೋಜನೆಯಡಿಯಲ್ಲಿ ಮಂಜೂರಾದ ಅನುದಾನದಿಂದ 20 ಕೋಟಿ ರೂ.ವೆಚ್ಚದಲ್ಲಿ ಗಣಕಯಂತ್ರಗಳು ಹಾಗೂ ಇತರೆ ಉಪಕರಣಗಳನ್ನು ಖರೀದಿಸಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ-ಸಿದ್ದಾಪೂರ ಜಿಲ್ಲಾ ಮುಖ್ಯ ರಸ್ತೆಯನ್ನು 8 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಹಾಗೂ ಮೈಸೂರು ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ಸಾಗರಕಟ್ಟೆ ಬಳಿ ಪ್ರಗತಿಯಲ್ಲಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು 33.52 ಕೋಟಿ ರೂ.ಪರಿಷ್ಕೃತ ಟೆಂಡರ್ ಮೊತ್ತಕ್ಕೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಲಬುರಗಿ ತಾಲೂಕಿನ ಬ್ರಹ್ಮಪೂರ ಗ್ರಾಮದ ಸ.ನಂ.28/1ರಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿರುವ 100್ಡ150 ಅಡಿ ಅಳತೆಯ ನಿವೇಶನವನ್ನು ಗಾಂಧಿವನ ನಿರ್ಮಾಣಕ್ಕಾಗಿ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಟ್ರಸ್ಟ್‌ಗೆ ಶೇ.15ರಷ್ಟು ಮಾರ್ಗಸೂಚಿದರ ನಿಗದಿಪಡಿಸಲಾಗಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 11.50 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Write A Comment