ಹೊಸದಿಲ್ಲಿ, ಅ.3: ಕರ್ನಾಟಕದ ಐಎಎಸ್ ಅಧಿಕಾರಿ ಡಿ.ಕೆ.ರವಿಯದು ಆತ್ಮಹತ್ಯೆ ಪ್ರಕರಣ. ಈ ಪ್ರಕರಣದ ಸಂಬಂಧವಾಗಿ ಯಾರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಸಿಬಿಐ ಪ್ರಕರಣದ ಮುಕ್ತಾಯ ವರದಿಯಲ್ಲಿ ಹೇಳಿದೆ.
ವರದಿಯನ್ನು ಸಿದ್ಧಪಡಿಸಿರುವ ಸಿಬಿಐ ತಂಡವು ವಾರದ ಹಿಂದೆಯೇ ದಿಲ್ಲಿಯ ಕೇಂದ್ರಕಚೇರಿಗೆ ಸಲ್ಲಿಸಿ ಅದರ ಒಪ್ಪಿಗೆಗಾಗಿ ಕಾಯುತ್ತಿದ್ದು, ತದನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವರದಿಯನ್ನು ಸಲ್ಲಿಸುವ ಸಾಧ್ಯತೆಗಳಿವೆ.
ಡಿ.ಕೆ.ರವಿ ಸಾವಿನ ಪ್ರಕರಣ ಕುರಿತಾದ ತನಿಖೆಯನ್ನು ಸಿಬಿಐ ತಂಡ ಈಗಾಗಲೇ ಮುಕ್ತಾಯಗೊಳಿಸಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂಬ ನಿರ್ಧಾರಕ್ಕೆ ತನಿಖಾ ಸಂಸ್ಥೆ ಬಂದಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ ಡಿ.ಕೆ.ರವಿ ಈ ವರ್ಷದ ಮಾರ್ಚ್ 16ರಂದು ತನ್ನದೇ ಅಪಾರ್ಟ್ಮೆಂಟ್ನಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಮರಳು ಮಾಫಿಯಾವನ್ನು ಎದುರು ಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಡಿ.ಕೆ.ರವಿ ಸಾವಿನ ಘಟನೆ ರಾಜ್ಯಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.