ಕನ್ನಡ ವಾರ್ತೆಗಳು

ಚಂಡಿಕೋರಿ ಭರ್ಜರಿ ಪ್ರದರ್ಶನ : ಒಂದೇ ವಾರದಲ್ಲಿ 46 ಲಕ್ಷ ರೂ. ದಾಖಲೆ ಕಲೆಕ್ಷನ್

Pinterest LinkedIn Tumblr

Chandikori_Press_Cluib_1

ಮಂಗಳೂರು: ಚಂಡಿಕೋರಿ ತುಳು ಚಿತ್ರ ಬಿಡುಗಡೆಗೊಂಡಿರುವ ಎಲ್ಲಾ 11 ಟಾಕೀಸ್ ಗಳಲ್ಲೂ ಭರ್ಜರಿ ಪ್ರದರ್ಶನ ನೀಡುತ್ತಿದೆ. ಮಾತ್ರವಲ್ಲದೇ ಅತ್ಯಂತ ಹಾಸ್ಯಮಯ ನಿರೂಪಣೆಯೊಂದಿಗೆ ಮೂಡಿ ಬಂದಿರುವ ಸಾಂಸಾರಿಕ ತುಳು ಚಿತ್ರ ಚಂಡಿಕೋರಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ 46 ಲಕ್ಷ ರೂ. ದಾಖಲೆಯ ಕಲೆಕ್ಷನ್ ಮಾಡಿದೆ ಎಂದು ನಟ ಹಾಗೂ ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದ್ದಾರೆ.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವಾರ ಈ ಚಿತ್ರದೊಂದಿಗೆ ಬಿಡುಗಡೆಯಾದ ಇತರ ಎಲ್ಲಾ ಚಿತ್ರಗಳನ್ನು ದಾಟಿ ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗುತ್ತಿರುವ “ಚಂಡಿಕೋರಿ” ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ವಿಶಿಷ್ಟ ದಾಖಲೆ ಮಾಡುವುದರಲ್ಲಿ ಯಾವೂದೇ ಸಂಶಯವಿಲ್ಲ. ದರ್ಶನ್ ಅಭಿನಯದ ಕನ್ನಡ `ಐರಾವತ’ ವಿಜಯ್ ಅಭಿನಯದ ತಮಿಳು `ಪುಲಿ’ ಚಿತ್ರಗಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡಿದ್ದರೂ ಅವುಗಳಿಗಿಂತ ಚಂಡಿಕೋರಿ ಚಿತ್ರ ಹೆಚ್ಚಿನ ಕಲೆಕ್ಷನ್ ಮಾಡಿದೆ ಎಂದು ಹೇಳಿದರು.

Chandikori_Press_Cluib_2 Chandikori_Press_Cluib_3 Chandikori_Press_Cluib_4 Chandikori_Press_Cluib_5

ಚಂಡಿಕೋರಿ ಬಿಡುಗಡೆಯಾಗುವ ಮೊದಲು ತುಂಬಾ ಟೆನ್ಶನ್ ಆಗಿತ್ತು. ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಎಲ್ಲಾ ಟೆನ್ಶನ್ ಮಾಯವಾಗಿದೆ. ನನಗೆ ಕರೆಗಳ ಮೇಲೆ ಕರೆಗಳು ಬರುತ್ತಿದೆ. `ಸುಚಿತ್ರಾ ಟಾಕೀಸ್ ನಲ್ಲಿ ನೇರವಾಗಿ ಕೌಂಟರ್ ಬಳಿ ಹೋಗಿ ಟಿಕೇಟ್ ತೆಗೆದುಕೊಂಡು ಸಿನೇಮಾ ನೋಡಲಾಗುತ್ತಿತ್ತು. ಆದರೆ, ಚಂಡಿಕೋರಿ ಸಿನೇಮಾವನ್ನು ಮಾರುದ್ದದ ಕ್ಯೂನಲ್ಲಿ ನಿಂತು ಟಿಕೇಟ್ ತೆಗೆದುಕೊಂಡು ಚಿತ್ರ ನೋಡಿ ಆನಂದಿಸಿದ್ದೇವೆ ಎಂದು ಅಭಿಮಾನಿಗಳು ಫೋನ್ ಮಾಡಿ ಹೇಳುತ್ತಿದ್ದಾರೆ’ ಎಂದು ದೇವದಾಸ್ ಕಾಪಿಕಾಡ್ ವಿವರಿಸಿದರು.

Chandi_Kori_Still

ಚಿತ್ರದ ಹಾಡು, ನೃತ್ಯ, ಸಂಭಾಷಣೆ, ಛಾಯಾಗ್ರಹಣದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರ ಮಂದಿರಗಳಲ್ಲಿ ಚಂಡಿಕೋರಿ ಹೌಸ್ ಫುಲ್ ಪ್ರದರ್ಶನವನ್ನೇ ಕಾಣುತ್ತಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಗಾಂಧಿನಗರದಲ್ಲೂ ಚಂಡಿಕೋರಿ ಸುದ್ದಿ ಮಾಡಿದೆ. ಚಂಡಿಕೋರಿ ಚಿತ್ರದ ಬಗ್ಗೆ ನಿರ್ಮಾಪಕ, ನಿರ್ದೇಶಕರು ವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ನಟ ರಮೇಶ್ ಅರವಿಂದ ಅವರು ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದ ಅವರು, ಚಂಡಿಕೋರಿ ಶೀಘ್ರದಲ್ಲೇ ಬೆಂಗಳೂರಿನಲ್ಲೂ ತೆರೆ ಕಾಣಲಿದೆ. ಮುಂದಿನ ವಾರ ಬೆಂಗಳೂರಿನಲ್ಲಿ ಸ್ಟಾರ್ ಶೋ ಏರ್ಪಡಿಸಿ ಚಿತ್ರ ಬಿಡುಗಡೆಗೊಳಿಸಲಾಗುವುದು. ಬಳಿಕ ಮುಂಬಯಿ, ಗುಜರಾತ್ ಗಳಲ್ಲದೆ ಬಹ್ರೈನ್, ಕತಾರ್, ಮಸ್ಕತ್ ಮುಂತಾದ ದೇಶಗಳಲ್ಲೂ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.

ಶೀಘ್ರದಲ್ಲೇ ಇನ್ನೊಂದು ಚಿತ್ರಕ್ಕೆ ಸಿದ್ಧತೆ :

ಡಿಸೆಂಬರ್ ತಿಂಗಳಲ್ಲಿ ಇನ್ನೊಂದು ತುಳು ಚಿತ್ರವನ್ನು ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಚಿತ್ರಕಥೆ ಸಿದ್ಧವಾಗಿದೆ. ಹೆಸರು ಇನ್ನಷ್ಟೇ ಇಡಬೇಕಾಗಿದೆ. ಈ ಚಿತ್ರವನ್ನು ನಿರ್ಮಿಸಲು ಮೂರ್ನಾಲ್ಕು ಮಂದಿ ನಿರ್ಮಾಪಕರು ಮುಂದೆ ಬಂದಿದ್ದಾರೆ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.

ಸುಮಾರು ಎರಡು ಕೋಟಿ ರೂ.ಗಳಲ್ಲಿ ಅತ್ಯುತ್ತಮ ಚಿತ್ರ ನಿರ್ಮಿಸಲು ಸಾಧ್ಯ. ಉತ್ತಮ ಗುಣಮಟ್ಟದ ಚಿತ್ರವನ್ನು ಈ ಮೊತ್ತದಲ್ಲಿ ಪ್ರೇಕ್ಷಕರಿಗೆ ನೀಡಲು ಸಾಧ್ಯ. ಇತರ ಭಾಷೆಗಳ ಚಿತ್ರಗಳ ಸಾಲಿನಲ್ಲೇ ತುಳು ಚಿತ್ರವನ್ನೂ ನಿರ್ಮಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

75 ಲಕ್ಷ ರೂ. ಖರ್ಚು : ಈಗಾಗಲೇ ಕಲೆಕ್ಷನ್ ರೂ. 46 ಲಕ್ಷ :

ಚಿತ್ರದ ನಿರ್ಮಾಪಕ ಸಚಿನ್ ಉಪ್ಪಿನಂಗಡಿ ಮಾತನಾಡಿ, ಚಂಡಿಕೋರಿ ಚಿತ್ರದ ನಿರ್ಮಾಣಕ್ಕೆ 75 ಲಕ್ಷ ರೂ. ವೆಚ್ಚ ತಗುಲಿದೆ. ಆದರೆ, ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳಲಾಗಿಲ್ಲ. ಈ ಚಿತ್ರ ತೆರೆ ಕಂಡ ಒಂದೇ ವಾರದಲ್ಲಿ 46 ಲಕ್ಷ ರೂ. ಕಲೆಕ್ಷನ್ ಮಾಡಿರುವುದು ನಮಗೆಲ್ಲಾ ಸಂತೋಷದ ವಿಚಾರ ಎಂದು ಹೇಳಿದರು.

ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಅವರು ಮಾತನಾಡಿ, ಚಂಡಿಕೋರಿ ಯಶಸ್ಸು ಕಂಡಿರುವುದಕ್ಕೆ ಬಹಳಷ್ಟು ಖುಷಿಯಾಗುತ್ತಿದೆ. ಪ್ರೇಕ್ಷಕರನ್ನು ಯಾವ ರೀತಿ ಕನ್ವಿನ್ಸ್ ಮಾಡಬೇಕೆಂಬ ಆತಂಕವಿತ್ತು. ಆದರೆ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಚಂಡಿಕೋರಿ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೇವೆ ಎಂದು ಹೇಳಿದರು.

ಚಿತ್ರದ ಯಶಸ್ಸಿಗೆ ಮಾಧ್ಯಮದವರು ಬಹಳಷ್ಟು ಸಹಕಾರ ನೀಡಿದ್ದಾರೆ. ಇದರಿಂದ ಚಿತ್ರ ಯಶಸ್ಸು ಕಾಣಲು ಸಾಧ್ಯವಾಯಿತು ಎಂದು ಚಿತ್ರದ ಇನ್ನೋರ್ವ ನಿರ್ಮಾಪಕಿ ಶರ್ಮಿಳಾ.ಡಿ. ಕಾಪಿಕಾಡ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದದ ಎಡಿಟರ್ ಸುಜಿತ್ ನಾಯಕ್ ಉಪಸ್ಥಿತರಿದ್ದರು.

Write A Comment