ಕುಂದಾಪುರ: ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಒಂದು ಕೋಟಿಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದ ‘ಕಾಮತ್ ಜನರಲ್ ಸ್ಟೋರ್’ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ರವೀಂದ್ರನಾಥ್ ಕಾಮತ್ ಎನ್ನುವವರಿಗೆ ಸೇರಿದ ದೊಡ್ಡ ದಿನಸಿ ಅಂಗಡಿ ಇದಾಗಿದ್ದು ದಿನೋಪಯೋಗಿ ವಸ್ತುಗಳು ಸೇರಿದಂತೆ ಬಳಕೆಯ ಪ್ರಿಡ್ಜ್ ಸೇರಿದಂತೆ ಬೆಲೆಬಾಳುವ ಪರಿಕರಗಳಿದ್ದವು. ರಾತ್ರಿ ೧೧.೩೦ರ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣದಲ್ಲೇ ಬೆಂಕಿಯ ಕೆನ್ನಾಲಿಗೆ ಇಡೀ ಕೊಣೆಯನ್ನು ವ್ಯಾಪಿಸಿ ಸಂಪೂರ್ಣ ಅಂಗಡಿ ಬೆಂಕಿಗೆ ನಲುಗಿಹೋಗಿದೆ. ಅಂಗಡಿ ಒಳಗಿದ್ದ ಭಾಗಶಃ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅಲ್ಲದೇ ಬೆಂಕಿ ಪ್ರಕರತೆಗೆ ಸಂಪೂರ್ಣ ಕಟ್ಟಡವು ಹಾನಿಗೊಳಗಾಗಿದ್ದು ಅಂದಾಜು ಒಂದು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟಿನಿಂದ ಈ ಬೆಂಕಿ ಅವಘಡ ಸಂಭವಿಸಿದೆಯೆನ್ನಲಾಗುತ್ತಿದೆ.
ತಕ್ಷಣ ಸ್ಥಳೀಯರು ಕುಂದಾಪುರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕಾಗಮಿಸಿದ ಅವರು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು.











