ಬೆಂಗಳೂರು, ಅ.3: ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹ ವಿರೋಧದ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಲಾರಿ ಮಾಲಕರು ನಡೆಸುತ್ತಿರುವ ಮುಷ್ಕರ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಲಾರಿ ಮುಷ್ಕರದ ಬಿಸಿ ಜನಸಾಮಾನ್ಯರಿಗೆ ತಟ್ಟಲು ಆರಂಭಿಸಿದೆ.
ಹೊರರಾಜ್ಯಗಳಿಂದ ಬರುವ ಹಾಗೂ ಹೊರ ಹೋಗುವ ಲಾರಿಗಳು ಸೇರಿದಂತೆ ಸುಮಾರು 9 ಲಕ್ಷಕ್ಕೂ ಅಧಿಕ ಲಾರಿಗಳು ಸಂಚಾರ ಸ್ಥಗಿತಗೊಳಿಸಿರುವ ಪರಿಣಾಮ ಸರಕು ಸಾಗಣೆ ಸಂಪೂರ್ಣ ಸ್ತಬ್ಧಗೊಂಡಿದೆ.
ತರಕಾರಿ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಸಾಗಣೆಯಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗಿದೆ.
ಹೆದ್ದಾರಿ ಹಾಗೂ ಮುಖ್ಯರಸ್ತೆಗಳಲ್ಲಿನ ವಾರ್ಷಿಕ ಟೋಲ್ ಪದ್ಧತಿ ಜಾರಿ, ವೇಗ ನಿಯಂತ್ರಕ ಅಳವಡಿಕೆ ನಿಯಮಗಳ ಸಡಿಲಿಕೆ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅ.1ರಿಂದ ಲಾರಿ ಮುಷ್ಕರ ಆರಂಭಿಸಿದ್ದು, ಅ.4ರಿಂದ ಅನಿಲ ಪೂರೈಕೆ ಟ್ಯಾಂಕರ್‌ಗಳೂ ಲಾರಿ ಮುಷ್ಕರಕ್ಕೆ ಬೆಂಬಲ ನೀಡುವ ಸಾಧ್ಯತೆ ಇರುವುದರಿಂದ ಸಿಲಿಂಡರ್ ಅಭಾವ ತಲೆ ದೋರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ವಿವಿಧ ಮಾರುಕಟ್ಟೆಗಳು, ಎಪಿಎಂಸಿಗಳಿಗೆ ಬಿಸಿ ತಟ್ಟಿದ್ದು ಇಲ್ಲಿನ ಯಶವಂತಪುರ, ಕೆಆರ್ ಮಾರ್ಕೆಟ್, ಯಲಹಂಕ, ಜಯನಗರ, ಶಿವಾಜಿನಗರ ಸೇರಿ ಅನೇಕ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳು ನಿಗದಿತ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ.
ಮುಷ್ಕರದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಕೆಲವರು ಹವಣಿಸುತ್ತಿದ್ದು, ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟು ಮಾಡುವ ಯತ್ನ ನಡೆಸುತ್ತಿದ್ದಾರೆ. ದೈನಂದಿನ ಪದಾರ್ಥಗಳು ಆಟೊರಿಕ್ಷಾ ಇನ್ನಿತರ ವಾಹನಗಳಲ್ಲಿ ಸಾಗಾಣೆ ಮಾಡಲಾಗುತ್ತಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಯ ಮೇಲೂ ಲಾರಿ ಮುಷ್ಕರದ ಬಿಸಿ ತಟ್ಟಿದ್ದು, ಮರಳು, ಜಲ್ಲಿ, ಇಟ್ಟಿಗೆ, ಕಬ್ಬಿಣ ಹಾಗೂ ಸಿಮೆಂಟ್ ಸಾಗಣೆ ಸ್ಥಗಿತಗೊಂಡಿದೆ. ಆ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನೆ ಅವಲಂಬಿಸಿರುವ ಕಾರ್ಮಿಕರಿಗೂ ಮುಷ್ಕರದ ಬಿಸಿ ತಟ್ಟಲು ಆರಂಭಿಸಿದೆ.
ರಾಜ್ಯದಲ್ಲಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆದೆರಡು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಸಾಲುಗಟ್ಟಿ ಲಾರಿಗಳು ಸಾಲುಗಟ್ಟಿ ನಿಂತಿದ್ದು, ಹಾಲು, ಔಷಧ ಸೇರಿದಂತೆ ಕೆಲ ತುರ್ತು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆಲ್ಲ ಸರಕು-ಸಾಗಣೆಯಲ್ಲಿ ಸಂಪೂರ್ಣ ವ್ಯತ್ಯಯವಾಗಿದೆ.
ಈರುಳ್ಳಿ ಕಣ್ಣೀರು: ಮಳೆ ಕೊರತೆ, ವಿದ್ಯುತ್ ಕಣ್ಣಾಮುಚ್ಚಾಲೆ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಕಣ್ಣೀರು ತರಿಸುತ್ತಿದ್ದ ಈರುಳ್ಳಿ, ಇದೀಗ ಲಾರಿ ಮುಷ್ಕರದಿಂದಾಗಿ ಗ್ರಾಹಕರ ಕಣ್ಣುಗಳಲ್ಲಿಯೂ ನೀರು ತರಿಸುತ್ತಿದೆ. ಅಲ್ಲದೆ, ನಾಲ್ಕೈದು ದಿನಗಳ ಕಾಲ ಮಾರುಕಟ್ಟೆಗೆ ಬರಬೇಕಿರುವ ಈರುಳ್ಳಿ ಅನ್‌ಲೋಡ್ ಆಗದಿದ್ದರೆ ಕೊಳತುಹೋಗುವ ಸಾಧ್ಯತೆಯಿದೆ.
♦♦♦
ಹೆದ್ದಾರಿ ಸೇರಿ ಪ್ರಮುಖ ರಸ್ತೆಗಳಲ್ಲಿ ಅವೈಜ್ಞಾನಿಕ ಟೋಲ್ ವಸೂಲಿ ಸಂಬಂಧ ಕೇಂದ್ರ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಮುಷ್ಕರದ ಪರಿಣಾಮ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಹೆದ್ದಾರಿ-ಪ್ರಮುಖ ರಸ್ತೆಗಳಲ್ಲಿನ ಅವೈಜ್ಞಾನಿಕ ಟೋಲ್ ಸಂಗ್ರಹ ಕೂಡಲೇ ನಿಲ್ಲಿಸಬೇಕು. ವೇಗ ನಿಯಂತ್ರಣ ಅಳವಡಿಕೆ ನಿಯಮಗಳನ್ನು ಸಡಿಲಿಸುವುದು ಸೇರಿದಂತೆ ಲಾರಿ ಮಾಲಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವವರೆಗೂ ಮುಷ್ಕರ ಕೈಬಿಡುವುದಿಲ್ಲ.
– ಷಣ್ಮುಗಪ್ಪ, ಲಾರಿ ಮಾಲಕರ ಸಂಘದ ಅಧ್ಯಕ್ಷ
♦♦♦
‘ಅವೈಜ್ಞಾನಿಕ ಟೋಲ್ ರದ್ದು, ವೇಗ ನಿಯಂತ್ರಕ ಅಳವಡಿಕೆ ಆದೇಶ ವಾಪಸ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಲಾರಿ ಮುಷ್ಕರದ ಬಗ್ಗೆ ಕೇಂದ್ರ ಸರಕಾರ ನಿರ್ಲಕ್ಷ ತೋರುತ್ತಿರುವ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸಬೇಕಾಗಿದೆ. ಕೂಡಲೇ ಲಾರಿ ಮಾಲಕರ ಬೇಡಿಕೆಗಳ ಬಗ್ಗೆ ಕೇಂದ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು’
-ಟೆಂಪೊ ಬಾಬು, ಸಣ್ಣ-ಮಧ್ಯಮ ಗೂಡ್ಸ್ ಟ್ರಕ್ ಮಾಲಕರ ಸಂಘದ ಅಧ್ಯಕ್ಷ
ಕರ್ನಾಟಕ