ಬೆಂಗಳೂರು, ಅ.2- ಉದ್ಯಾನನಗರಿಯನ್ನು ಆರು ತಿಂಗಳೊಳಗೆ ಕಸಮುಕ್ತ ನಗರವನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಜ್ಞೆ ಮಾಡಿದರು. ಬಿಬಿಎಂಪಿ ಮತ್ತು ವಿಆರ್‌ಎಲ್ ಸಮೂಹ ಸಂಸ್ಥೆಗಳು ನಗರದಲ್ಲಿಂದು ಹಮ್ಮಿಕೊಂಡಿದ್ದ ಸ್ವಚ್ಛ ಸುರಕ್ಷತಾ ಬೆಂಗಳೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿಎಂ ಮಾತನಾಡಿದರು. ಸ್ವಚ್ಛತಾ ಕಾರ್ಯಕ್ರಮ ಕೇವಲ ಸರ್ಕಾರದ್ದೊಂದೇ ಕಾರ್ಯವಲ್ಲ. ಇದರಲ್ಲಿ ಸಾರ್ವಜನಿಕರೂ ಕೂಡ ಸಹಕರಿಸಬೇಕು.
ನಗರವನ್ನು ಕಸಮುಕ್ತ ಮಾಡಬೇಕಾದರೆ ನಾಗರಿಕರು ತಮ್ಮ ಮನೆಯಲ್ಲೇ ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು. ಕಸದ ಸಮಸ್ಯೆ ನಿವಾರಣೆ ಕುರಿತು ಸರ್ಕಾರ ಸಹ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ನಾಲ್ಕು ಕಸ ಸಂಸ್ಕರಣಾ ಘಟಕ ಪ್ರಾರಂಭಿಸಿದ್ದೇವೆ. ಇನ್ನೂ ಮೂರು ಘಟಕಗಳು ಸದ್ಯದಲ್ಲೇ ಪ್ರಾರಂಭವಾಗಲಿವೆ.
ಇದರ ಜತೆಗೆ ಕಸದಿಂದ ಇಂಧನ ಉತ್ಪಾದಿಸುವ ಯೋಜನೆ ಜಾರಿಗೆ ತರಲು ನಮ್ಮ ಸರ್ಕಾರ ಚಿಂತನೆ ಮಾಡಿದೆ. ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 4 ಸಾವಿರ ಟನ್ ಕಸದಿಂದ 700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. 3 ತಿಂಗಳೊಳಗೆ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಒಟ್ಟಾರೆ ಆರು ತಿಂಗಳೊಳಗೆ ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆಗೆ ಮುಕ್ತಿ ಹಾಡಿ ಕಸಮುಕ್ತ ನಗರ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ಮೇಯರ್ ಮಂಜುನಾಥರೆಡ್ಡಿ ಮಾತನಾಡಿ, ನೀವು ಹೊರ ಹಾಕುವ ಕಸ ಇನ್ನೊಬ್ಬರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಕಸ ವಿಲೇವಾರಿ ಮಾಡುವ ಮುನ್ನ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದರು. ಬೇರ್ಪಡಿಸದ ತ್ಯಾಜ್ಯವನ್ನು ಹೊರಹಾಕಿ ನೀವೇನೋ ಮನೆಯಲ್ಲಿ ಆರಾಮವಾಗಿ ಇರುತ್ತೀರಾ. ಆದರೆ ಮಂಡೂರು, ಬಿಂಗಿಪುರ ಮತ್ತಿತರ ತ್ಯಾಜ್ಯ ಘಟಕಗಳುಳ್ಳ ಪ್ರದೇಶಗಳಲ್ಲಿ ಡೇಂಘಿ ಮತ್ತಿತರ ಸಾಂಕ್ರಾಮಿಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ.
ಆದ್ದರಿಂದ ನಗರದ ನಾಗರಿಕರು ತಮ್ಮ ತಮ್ಮ ಮನೆಗಳಲ್ಲೇ ಕಸ ವಿಂಗಡಿಸಿ ನೀಡುವ ಮೂಲಕ ಸ್ವಚ್ಛ ಬೆಂಗಳೂರು ಕಾರ್ಯಕ್ರಮಕ್ಕೆ ಕೈಜೋಡಿಸಬೇಕಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಚ್ಛತೆ ಕಾಪಾಡುವುದಾಗಿ ಪ್ರತಿಜ್ಞಾ ವಿಧಿ ಬೋಧಿಸಿದರಲ್ಲದೆ, ತುಳಸಿ ಗಿಡಗಳನ್ನು ವಿತರಿಸಿದರು. ಇದಕ್ಕೂ ಮುನ್ನ ನಡೆದ ವಾಕಥಾನ್‌ನಲ್ಲಿ ಖ್ಯಾತ ಚಿತ್ರ ನಟ ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಶಾಸಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.