ಬೆಂಗಳೂರು, ಅ.2- ನಗರದ ಎರಡು ಅಂತಸ್ತಿನ ಶಾಪಿಂಗ್ ಮಾಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಬ್ರಾಂಡೆಡ್ ಬಟ್ಟೆಗಳು, ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ.
ಮಾರತ್‌ಹಳ್ಳಿ ಮುಖ್ಯರಸ್ತೆಯಲ್ಲಿ ಬ್ರಾಂಡ್ ಫ್ಯಾಕ್ಟರಿ ಎಂಬ ಹೆಸರಾಂತ ಶಾಪಿಂಗ್ ಮಾಲ್ ಇದ್ದು, ಇಲ್ಲಿ ಪ್ರತಿಷ್ಠಿತ ಕಂಪನಿಗಳ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದೆ. ಎರಡು ಅಂತಸ್ತಿನಲ್ಲಿ ಇರುವ ಈ ಮಾಲ್‌ನಲ್ಲಿ ಮುಂಜಾನೆ 3.45ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿಗಳು 20 ವಾಹನಗಳೊಂದಿಗೆ ತೆರಳಿ ಬೆಂಕಿ ನಂದಿಸಲು ಮುಂದಾದರು.
ಬೆಂಕಿಯ ಕೆನ್ನಾಲಿಗೆಗೆ ಮಾಲ್‌ನಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಮೌಲ್ಯದ ಬಟ್ಟೆಗಳು, ಇನ್ನಿತರೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯ ತೀವ್ರತೆ ಕಡಿಮೆ ಮಾಡಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಬೆಳಗ್ಗೆ 10 ಗಂಟೆ ವೇಳೆಗೆ ಬೆಂಕಿಯನ್ನು ತಹಬದಿಗೆ ತಂದು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿ ಅವಘಡದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆಯೆಂದು ಅಂದಾಜಿಸಲಾಗಿದ್ದು, ಸಂಪೂರ್ಣ ನಷ್ಟದ ಮೌಲ್ಯ ಸದ್ಯ ತಿಳಿದುಬಂದಿಲ್ಲ. ಬಹುಶಃ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಆವರಿಸಿರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.