Karnataka

ಶಾರ್ಜಾದಲ್ಲಿ ಅದ್ದೂರಿಯಾಗಿ ನಡೆದ ‘ಶಾರ್ಜಾ ಕರ್ನಾಟಕ ಸಂಘ’ದ ರಾಜ್ಯೋತ್ಸವ; ಸುಂದರ್ ಶೆಟ್ಟಿಗೆ ‘ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ-2026’ ಪ್ರದಾನ 

Pinterest LinkedIn Tumblr

ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ 24ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮವು ರವಿವಾರ ಅಜ್ಮಾನ್‌ನ ನಾರ್ತ್ ಗೇಟ್ ಬ್ರಿಟಿಷ್ ಸ್ಕೂಲ್‌ನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಕನ್ನಡ ಭಾಷೆ, ನಾಡು, ನುಡಿ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.

ಕನ್ನಡ ಭಾಷೆ, ಸಂಸ್ಕೃತಿಯ ವೈಭವವನ್ನು ಕೊಂಡಾಡಿದ ವಿಷ್ಣುವರ್ಧನ್ ರೆಡ್ಡಿ: ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ  ದುಬೈನ ಭಾರತದ ಕಾನ್ಸುಲ್ ಜನರಲ್ ವಿಷ್ಣುವರ್ಧನ್ ರೆಡ್ಡಿ, ‘ಕರ್ನಾಟಕದ ಸಾಂಸ್ಕೃತಿಕ ವೈಭವ, ಐತಿಹಾಸಿಕ ಪರಂಪರೆ, ಕಲೆ, ಸಾಹಿತ್ಯ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸುವ ಇಂತಹ ಕಾರ್ಯಕ್ರಮಗಳು ವಿದೇಶದಲ್ಲಿಯೂ ಕನ್ನಡದ ಕಂಪನ್ನು ಪಸರಿಸುತ್ತಿರುವುದು ಹೆಮ್ಮೆಯ ಹಾಗೂ ಸಂತಸದ ಸಂಗತಿ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ನಿಮ್ಮ ಅಭಿಮಾನ, ಪ್ರೀತಿ ಹಾಗೂ ಗೌರವ ಇದೇ ರೀತಿ ಮುಂದಿನ ಪೀಳಿಗೆಗೂ ತಲುಪುವಂತಾಗಲಿ. ವಿದೇಶದಲ್ಲಿ ನೆಲೆಸಿದ್ದರೂ ನಮ್ಮ ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಮ್ಮ ಪ್ರಯತ್ನ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಸಲಹಾ ಮಂಡಳಿ ನಿರ್ದೇಶಕರಾದ ಕೆಎನ್‌ಆರ್‌ಐ ಯುಎಇ ಫೋರಂ ಅಧ್ಯಕ್ಷ, ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ, ಅಕ್ಮೆ(ACME)  ಬಿಲ್ಡಿಂಗ್ ಮೆಟೀರಿಯಲ್ಸ್ ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಸ್ಪ್ರೈಟೆಕ್ ಕಾಂಟ್ರಾಕ್ಟಿಂಗ್ ಆಡಳಿತ ನಿರ್ದೇಶಕ ರಾಮಚಂದ್ರ ಹೆಗಡೆ, ಮೆರಿಟ್ ಫ್ರೈಟ್ ಸಿಸ್ಟಮ್ಸ್ ಆಡಳಿತ ನಿರ್ದೇಶಕ ಜೋಸೆಫ್ ಮಥಾಯಿಸ್, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಸಲಹಾ ಸಮಿತಿಯ ಎಂ.ಇ.ಮುಳೂರು, ಸತೀಶ್ ಪೂಜಾರಿ, ಸುಗಂಧರಾಜ ಬೇಕಲ್ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಈ ಸಂದರ್ಭದಲ್ಲಿ ಗಣ್ಯರೆಲ್ಲರೂ ಒಟ್ಟಾಗಿ ಕರ್ನಾಟಕದ ಧ್ವಜವನ್ನು ಹಾರಿಸುವ ಮೂಲಕ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮೆರೆದರು. ಕನ್ನಡದ ಧ್ವಜಾರೋಹಣದೊಂದಿಗೆ ಸಮಾರಂಭದಲ್ಲಿ ನಾಡಿನ ಏಕತೆ ಮತ್ತು ಕನ್ನಡಿಗರ ಅಭಿಮಾನದ ಸಂಭ್ರಮ ಅನಾವರಣಗೊಂಡಿತು.

ಸುಂದರ್ ಶೆಟ್ಟಿಗೆ ‘ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’ ಪ್ರದಾನ: ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಕರ್ನಾಟಕ ಸಂಘ ಶಾರ್ಜಾ ನೀಡುವ 2026ರ ‘ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’ಯನ್ನು  ಸಮಾಜಸೇವಕ ಹಾಗೂ ಉದ್ಯಮಿ ಸುಂದರ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶೇಷ ಗೌರವ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಪ್ರಭಾಕರ ಸುವರ್ಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಅಬ್ದುಲ್ ಸಲಾಮ್ ಹಸನ್ ಬ್ಯಾರಿ ಅವರಿಗೆ ವಿಶೇಷ ಸಾಧಕ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಂಘದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಸದಸ್ಯರ ಪೈಕಿ ರಘುರಾಮ್ ಶೆಟ್ಟಿಗಾರ್ ದಂಪತಿಯನ್ನು ಸಂಘಟನಾ ಸೇವಾ ಗೌರವದೊಂದಿಗೆ ಅಭಿನಂದಿಸಲಾಯಿತು.

ಕರಾವಳಿಯ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರ ಕಲಾಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಅಮೇರಿಕದಲ್ಲಿ ನಡೆದ 44ನೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನದಲ್ಲಿ (ISDC 2026) ಭಾಗವಹಿಸುವ ಮೂಲಕ ಬಾಹ್ಯಾಕಾಶ ವಿಜ್ಞಾನ ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ಗಮನ ಸೆಳೆದ ಮಂಗಳೂರಿನ ಉಳ್ಳಾಲ ಮೂಲದ ವಿದ್ಯಾರ್ಥಿ ದಕ್ಷಿತ್ ಪ್ರೇಮಜಿತ್ ಅವರನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ವೇಳೆ ಈ ಬಾರಿಯ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ ಪೂಜಾರಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುಎಇಯ ಖ್ಯಾತ ಉದ್ಯಮಿ ಡಾ.ಬು.ಅಬ್ದುಲ್ಲಾ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ಶೇರಿಗಾರ್, ರಾಮಚಂದ್ರ ಹೆಗಡೆ, ಜೋಸೆಫ್ ಮಥಾಯಿಸ್,  ವಿಶ್ವನಾಥ್ ಶೆಟ್ಟಿ,  ಉಪಾಧ್ಯಕ್ಷ ಸೈಯ್ಯದ್ ಅಝ್ಮಲ್, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ಉಪಸ್ಥಿತರಿದ್ದರು.

ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದ ಹರೀಶ್ ಶೇರಿಗಾರ್: ಇದೇ ವೇಳೆ ಯುಎಇಯ ಖ್ಯಾತ ಗಾಯಕ ಹಾಗೂ ಉದ್ಯಮಿ ಹರೀಶ್ ಶೇರಿಗಾರ್ ಅವರು ಹಳೆಯ ಕನ್ನಡ ಚಲನಚಿತ್ರ ಗೀತೆಗಳನ್ನು ಸುಮಧುರವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಕನ್ನಡ ಚಿತ್ರರಂಗದ ಸುವರ್ಣಯುಗದ ಮಧುರ ಗೀತೆಗಳು ಸಭಿಕರನ್ನು ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ದು, ಸಂಗೀತ ಸಂಜೆಗೆ ವಿಶೇಷ ಮೆರುಗು ನೀಡಿದವು.

ಮನರಂಜಿಸಿದ ಅರ್ಷಿಯಾ ಖಾನ್ ‘ಐತಲಕಡಿ’ ಕಾರ್ಯಕ್ರಮ: ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರು ನಡೆಸಿಕೊಟ್ಟ ‘ಐತಲಕಡಿ’ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ತಮ್ಮ ವಿಶಿಷ್ಟ ನಿರೂಪಣೆ, ಹಾಸ್ಯಮಯ ಮಾತುಗಾರಿಕೆ ಹಾಗೂ ಮನರಂಜನಾತ್ಮಕ ಪ್ರಸ್ತುತಿಯ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.

ಗಮನ ಸೆಳೆದ ‘ಮಯೂರ ಗೆಜ್ಜೆ–ಕನ್ನಡಿಗರ ಹೆಜ್ಜೆ’ ನೃತ್ಯ ಸ್ಪರ್ಧೆ; ವಿಜೇತ ತಂಡಗಳಿಗೆ ಬಹುಮಾನ ವಿತರಣೆ: ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಮಯೂರ ಗೆಜ್ಜೆ–ಕನ್ನಡಿಗರ ಹೆಜ್ಜೆ’ ಶೀರ್ಷಿಕೆಯಡಿ ಗಾಯನ, ನೃತ್ಯ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೃತ್ಯ ಸ್ಪರ್ಧೆಯು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಕಲಾವಿದರ ಪ್ರತಿಭೆ ಮತ್ತು ನೃತ್ಯ ವೈವಿಧ್ಯವನ್ನು ಅನಾವರಣಗೊಳಿಸಿತು.

ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಜ್ಯೋತಿ ಬಂಗೇರ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿದರೆ, ರಕ್ಷಿತಾ ರೈ ಮತ್ತು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸೀನಿಯರ್ ವಿಭಾಗದಲ್ಲಿ ಕಾವ್ಯ ಶಶಿಕುಮಾರ್ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿದರೆ, ಶ್ರೀ ವಿನಯ್ ಮತ್ತು ತಂಡ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

‘ಮಯೂರ ಸವಿರುಚಿ 2026’ ಅಡುಗೆ ಸ್ಪರ್ಧೆ: ವಿಜೇತರಿಗೆ ಬಹುಮಾನ: ಕರ್ನಾಟಕ ಸಂಘ ಶಾರ್ಜಾದಿಂದ ವಿನೂತನವಾಗಿ ಬೋಟ್‌ಮೆನ್ಸ್ ಹಬ್ (Boatmen’s Hub) ವತಿಯಿಂದ ಆಯೋಜಿಸಲಾಗಿದ್ದ ‘ಮಯೂರ ಸವಿರುಚಿ 2026’-ಬೆಂಕಿರಹಿತ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಸ್ಪರ್ಧಿಗಳು ತಮ್ಮ ಪಾಕಕೌಶಲ್ಯವನ್ನು ಪ್ರದರ್ಶಿಸಿದ್ದು,  ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.

‘ಅತ್ಯುತ್ತಮ ರುಚಿ’ ಬಹುಮಾನ- ಉಮಾ ಮಹೇಶ್ವರಿ ಆರ್.(ಬೆಂಗಳೂರು)

‘ಅತ್ಯುತ್ತಮ ಸಾಂಪ್ರದಾಯಿಕ ಅಡುಗೆ’ ಬಹುಮಾನ- ಪೂರ್ಣಿಮಾ ಕಾಮತ್ ಬಿ.ಎಸ್.(ಬೆಂಗಳೂರು)

‘ಅತ್ಯುತ್ತಮ ಆರೋಗ್ಯಕರ ಆಹಾರ’ ಬಹುಮಾನ- ಜೀವನ್ ಜ್ಯೋತಿ(ದಕ್ಷಿಣ ಕನ್ನಡ)

‘ಅತ್ಯುತ್ತಮ ಪ್ರಸ್ತುತಿ’ ಬಹುಮಾನ- ವಾಣಿ ವಿ. ನಾಯಕ್(ಉಡುಪಿ)

‘ಅತ್ಯುತ್ತಮ ಸೃಜನಾತ್ಮಕ ಅಡುಗೆ’ ಬಹುಮಾನ- ಸೌಮ್ಯ ಶೆಟ್ಟಿ(ಮಂಗಳೂರು)

‘ಮಯೂರ ಪಾಕ ಸಿರಿ-2026’ ಬಹುಮಾನ- ದಾಕ್ಷಾಯಿಣಿ ಎಸ್. ಕುಲಾಲ್(ದಕ್ಷಿಣ ಕನ್ನಡ)

ಸ್ಪರ್ಧಿಗಳು ಮಸಾಲಾ ಅವಲಕ್ಕಿ, ಬೆಲ್ಲದ ಪಾನಕ, ಕಡಲೆಕಾಯಿ ಚಾಟ್, ಉಡುಪಿ ಖಾರ ಸೌತೆಕಾಯಿ ಬೋಟ್ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಿದ್ದರು.

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಹಾಗು ಉಪಾಧ್ಯಕ್ಷ ಸಯ್ಯದ್ ಮೊಹಮ್ಮದ್ ಅಝ್ಮಲ್  ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಆರತಿ ಅಡಿಗ, ಹಿತೇಶ್ ಗಾಣಿಗ ಹಾಗು ನಿಕಿತಾ ಪೂಜಾರಿ ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ವಂದಿಸಿದರು.

ಕಾರ್ಯಕ್ರಮ ಚೆಂದಗಾಣಿಸಿದ ಸಂಘಟಕರು, ಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಸಹಕಾರ ನೀಡಿದರು. ಅಧ್ಯಕ್ಷ ವಿಶ್ವನಾಥ್ ಶೆಟ್ಟಿ,  ಉಪಾಧ್ಯಕ್ಷ ಸಯ್ಯದ್ ಮೊಹಮ್ಮದ್ ಅಜ್ಮಲ್, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ, ಜಂಟಿ ಕಾರ್ಯದರ್ಶಿ ದಿನೇಶ್ ಎಂ. ಸಾಲ್ಯಾನ್, ಖಜಾಂಚಿ ಸುಗಂದರಾಜ್ ಬೇಕಲ್, ಜಂಟಿ ಖಜಾಂಚಿ ರಘುರಾಮ್ ಶೆಟ್ಟಿಗಾರ್, ಮನರಂಜನಾ ಕಾರ್ಯದರ್ಶಿ ರಿತೇಶ್ ಆಂಚನ್, ಜಂಟಿ ಮನರಂಜನಾ ಕಾರ್ಯದರ್ಶಿ ಪ್ರೇಮಾನಂದ್ ಮಾರ್ನಾಡ್, ಕ್ರೀಡಾ ಕಾರ್ಯದರ್ಶಿ ಅಮರ್ ಉಮೇಶ್ ನಂತೂರು, ಜಂಟಿ ಕ್ರೀಡಾ ಕಾರ್ಯದರ್ಶಿಗಳಾದ ಜೀವನ್ ಕುಕ್ಕಿಯನ್ ಮತ್ತು ಮೊಹಮ್ಮದ್ ಅಬ್ರಾರ್ ಉಲ್ಲಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುದರ್ಶನ್ ಹೆಗ್ಡೆ, ಸುರೇಶ್ ಎನ್. ಶೆಟ್ಟಿ, ಸುಜಿತ್ ಎಲ್. ಫೆರ್ನಾಂಡಿಸ್, ಸುಮನ್ ಜಾಯ್ಸನ್ ವಾಸ್, ವಿಜಯಕುಮಾರ್ ಶೆಟ್ಟಿ, ವಿಠಲ್ ರಿಷನ್ ನಾಯಕ್, ಕಿರಣ್, ಸಲಹಾ ಸಮಿತಿಯ ನೋಯೆಲ್ ಡಿ’ಅಲ್ಮೇಡಾ, ಎಂ.ಇ.ಮುಳೂರು, ಸತೀಶ್ ಪೂಜಾರಿ ಅವರು ಕಾರ್ಯಕ್ರಮ ಆರಂಭದಿಂದ ಕೊನೆಯವರೆಗೆ ಸುಸೂತ್ರವಾಗಿ ನಡೆಯುವಂತೆ ಸಹಕರಿಸಿದರು.

Comments are closed.