ಕರ್ನಾಟಕ

ಬಯೋ ಬಸ್‌ಗಳಿಗೆ ಚಾಲನೆ

Pinterest LinkedIn Tumblr

busಬೆಂಗಳೂರು, ಅ.2- ಶೇ.20ರಷ್ಟು ಬಯೋ ಇಂಧನ ಬಳಸುವ ಕೆಎಸ್‌ಆರ್‌ಟಿಸಿಯ 10 ಬಯೋಬಸ್‌ಗಳಿಗೆ ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದರು. ಬೆಂಗಳೂರಿನಿಂದ ಶಿವಮೊಗ್ಗ ಮತ್ತಿತರೆಡೆಗೆ ಇಂದಿನಿಂದ 10 ಬಯೋಬಸ್‌ಗಳು ಸಂಚಾರ ಪ್ರಾರಂಭಿಸಲಿವೆ.

ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಜೈವಿಕ ಇಂಧನ ಬಳಕೆಗೆ ಅನುಮತಿ ನೀಡಿದೆ. ಇಂದು 10 ಬಯೋಬಸ್‌ಗಳನ್ನು  ಪ್ರಾರಂಭಿಸಿದ್ದೇವೆ. ಮೊದಲಿಗೆ ಒಂದು ಡಿಪೋದಲ್ಲಿನ ಬಸ್‌ಗಳಲ್ಲಿ ಬಯೋ ಇಂಧನ ಬಳಕೆ ಮಾಡಲಾಗುತ್ತದೆ. ಮೂರ್ನಾದಲ್ಕು ತಿಂಗಳಲ್ಲಿ ಎಲ್ಲಾ ಡಿಪೋಗಳಲ್ಲೂ ಬಯೋ ಇಂಧನ ಬಳಕೆ ಮಾಡಿ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಬಯೋ ಇಂಧನ ಬಳಕೆಯಿಂದ ಒಂದು ಲೀಟರ್ ಡೀಸೆಲ್‌ಗೆ 5ರೂ. ಉಳಿಕೆಯಾಗುತ್ತದೆ. ವಾರ್ಷಿಕ 50 ಕೋಟಿ ರೂ.ಉಳಿತಾಯವಾಗಲಿದೆ ಎಂದರು.  ಶೇ.80ರಷ್ಟು ಡೀಸೆಲ್ ಮತ್ತು ಶೇ.20ರಷ್ಟು ಬಯೋ ಇಂಧನ ಬಳಕೆ ಮಾಡಿ ಬಸ್ ಸಂಚರಿಸುವುದರಿಂದ ವಾಯುಮಾಲಿನ್ಯ ಕಡಿಮೆ ಯಾಗಲಿದೆ ಎಂದು ಹೇಳಿದ ಅವರು, ನವೀಕರಿಸಬಹುದಾದ ಇಂಧನ, ಗ್ಲಿಸರಿನ್, ಕರಿದು ವೇಸ್ಟೇಜಾದ ಎಣ್ಣೆ,  ಬೇವು, ಹೊಂಗೆ ಎಣ್ಣೆಯಿಂದ  ಉತ್ಪತ್ತಿಯಾದ ಇಂಧನ ಬಳಕೆ ಮಾಡಲಾಗುತ್ತದೆ  ಎಂದರು.

ರಸ್ತೆ ಗುಂಡಿ ಮುಚ್ಚಲು ಆದ್ಯತೆ:
ನಗರದಲ್ಲಿ ಇತ್ತೀಚೆಗೆ ಪ್ರತೀ ದಿನ ಮಳೆ ಬರುತ್ತಿರುವುದರಿಂದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ಕಷ್ಟವಾಗುತ್ತಿದೆ. ಆದರೂ ಶೀಘ್ರವೇ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಇದೇ ವೇಳೆ ರಾಮಲಿಂಗಾರೆಡ್ಡಿ ತಿಳಿಸಿದರು. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಈಗಾಗಲೇ ಮೂರ್ನಾವಲ್ಕು ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ ಎಂದರು.

ನಗರದಲ್ಲಿ ಗುಜರಿ ಮಾಫಿಯಾ ಸೇರಿದಂತೆ ಎಲ್ಲಾ ರೀತಿಯ ಮಾಫಿಯಾಗಳ ಮೇಲೆ ಕಣ್ಣಿಟ್ಟಿದ್ದು, ಇದನ್ನು ಮಟ್ಟಹಾಕಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Write A Comment